ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ನಿನ್ನೆ ಸಂಜೆ (ಡಿ.4) ಹೃದಯಾಘಾತ ಸಂಭವಿಸಿದ ಪರಿಣಾಮ ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಸುಮಾರು 73 ದಿನಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಕಾರ್ಡಿಯಾ ಅರೆಸ್ಟ್ ಆಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಅಪೊಲೋ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಲು ಪ್ರಾರಂಭಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಹಸ್ರಾರು ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಅಮ್ಮನಿಗಾಗಿ ಕಂಬನಿ, ಪ್ರಾರ್ಥನೆಗಳ ಸುರಿಮಳೆ ಹರಿದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಆಸ್ಪತ್ರೆ ಎದುರು ಜಮಾಯಿಸಿರುವವರನ್ನು ನಿಯಂತ್ರಿಸಲು ನಿನ್ನೆ ರಾತ್ರಿ ಲಘು ಲಾಠಿ ಚಾರ್ಜ್ ಕೂಡಾ ಮಾಡಿದ್ದರು ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ರಾಜ್ಯಪಾಲರೊಂದಿಗೆ ಚರ್ಚಿಸಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ದೆಹಲಿಯ ಏಮ್ಸ್ ವೈದ್ಯರ ತಂಡ ಚೆನ್ನೈಗೆ ತೆರಳಿದ್ದು ಜಯಲಲಿತಾ ಅವರ ಚಿಕಿತ್ಸೆಯಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ. ಲಂಡನ್ನ ತಜ್ಞ ವೈದ್ಯರೊಬ್ಬರ ಮಾರ್ಗದರ್ಶನದಲ್ಲಿ ಚಿಕಿತ್ಸೆಗಳು ಪ್ರಾರಂಭವಾಗಿವೆ ಎನ್ನಲಾಗಿದೆ.
ಅಪೊಲೋ ಆಸ್ಪತ್ರೆಯ ಸುಮಾರು 2 ಕಿ.ಮೀ. ದೂರದವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಸಿಆರ್ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಇನ್ನು ಕರ್ನಾಟಕ-ತಮಿಳುನಾಡು ಗಡಿ ಭಾಗಗಳಲ್ಲಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ನಿನ್ನೆ ತಿರುವಣ್ಣಾಮಲೈ ಬಳಿ ಕರ್ನಾಟಕ ಸಾರಿಗೆ ಬಸ್ ಒಂದಕ್ಕೆ ಕಲ್ಲು ಹೊಡೆದಿರುವ ಪರಿಣಾಮವಾಗಿ ತಾತ್ಕಾಲಿಕವಾಗಿ ಕರ್ನಾಟಕ ಸಾರಿಗೆ ಸಂಚಾರವನ್ನು ತಮಿಳುನಾಡಿಗೆ ನಿಲ್ಲಿಸಲಾಗಿದೆ.
ಚೆನ್ನೈಗೆ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನೂ ನಿರ್ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ರಾಜಕೀಯ ಗಣ್ಯರು, ಅಪಾರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಅಮ್ಮ ಜಯಲಲಿತಾ ಅವರ ಶೀಘ್ರ ಚೇತರಿಕೆಗೆ ಆಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.