ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಸಂಚಾರವನ್ನು ಸುಗಮವಾಗಿಡಲು ಹಾಗೂ ಹಣದ ಸಮಸ್ಯೆಯನ್ನು ತಗ್ಗಿಸಲು ಟೋಲ್ ವಿನಾಯತಿಯನ್ನು ಡಿಸೆಂಬರ್ 2 ರ ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ.
ನಿಷೇಧಿತ 500 ರೂ. ನೋಟುಗಳನ್ನು ಡಿಸೆಂಬರ್ 2 ರ ಮಧ್ಯರಾತ್ರಿಯಿಂದ ಡಿಸೆಂಬರ್ 15 ರವರೆಗೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಕೇಂದ್ರಗಳಲ್ಲಿ ಸ್ವೀಕರಿಸಲಾಗುವುದು ಎಂದು ಸರ್ಕಾರ ಹೇಳಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಯಾವುದೇ ಅಡೆ-ತಡೆಗಳಾಗಬಾರದು ಎಂಬ ಕಾರಣಕ್ಕಾಗಿ ಡಿಸೆಂಬರ್ 2 ರ ಮಧ್ಯರಾತ್ರಿಯವರೆಗೆ ಟೋಲ್ಗಳಲ್ಲಿ ಸಂಗ್ರಹಿಸುತ್ತಿದ್ದ ತೆರಿಗೆ ಹಣವನ್ನು ತೆಗೆದುಹಾಕಲಾಗಿದೆ ಎಂದು ಸಾರಿಗೆ ಸಂಪರ್ಕ ಸಚಿವಾಲಯ ತಿಳಿಸಿದೆ.
ಎಸ್ಬಿಐ ಹಾಗೂ ಇತರ ಬ್ಯಾಂಕ್ಗಳ ಸಹಕಾರದಿಂದ ಟೋಲ್ ಕೇಂದ್ರಗಳಲ್ಲಿ ಸ್ವೈಪ್ ಮಶೀನ್ನನ್ನು ಅಳವಡಿಸಲಾಗುವುದು. ಇದರಿಂದ ಹೆದ್ದಾರಿಗಳಲ್ಲಿ ಓಡಾಡುವ ಗ್ರಾಹಕರಿಗೆ ಟೋಲ್ ಪಾವತಿಸಲು ಸುಲಭವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಟೋಲ್ ಸಂಗ್ರಹ ನಿಲ್ಲಿಸುವ ವಿಚಾರವನ್ನು ಸರ್ಕಾರವು ಮೊದಲು ನವೆಂಬರ್ 11 ರ ಮಧ್ಯರಾತ್ರಿಯವರೆಗೆ ಪ್ರಸ್ತಾಪಿಸಿತ್ತು. ಆದರೆ ಹೆದ್ದಾರಿಗಳ ಸಂಚಾರವನ್ನು ಸರಾಗವಾಗಿರಿಸಲು ತದನಂತರದಲ್ಲಿ ನವೆಂಬರ್ 14, ನವೆಂಬರ್ 18 ಹಾಗೂ ನವೆಂಬರ್ 24ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ವಿನಾಯಿತಿಯನ್ನು ಡಿಸೆಂಬರ್ 2 ರ ವರೆಗೆ ವಿಸ್ತರಿಸಲಾಗಿದೆ.
ಟೋಲ್ ವಿನಾಯತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು ಎಲ್ಲ ವ್ಯಾಪಾರಿ, ಏಜೆನ್ಸಿ ಮತ್ತು ಬಿಒಟಿ(ಬಿಲ್ಡ್-ಆಪರೇಟ್-ಟ್ರಾನ್ಸಫರ್), ಒಎಮ್ಟಿ(ಆಪರೇಟ್-ಮೆಂಟೆನ್-ಟ್ರಾನ್ಸಫರ್) ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.