ನವದೆಹಲಿ : ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ.
ಭಾರತದ 5 ಜನರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಾಲು ಮರದ ತಿಮ್ಮಕ್ಕ, ಗೌರಿ ಚಿಂದಾರ್ಕರ್, ನೇಹಾ ಸಿಂಗ್, ಮಲ್ಲಿಕಾ ಶ್ರೀನಿವಾಸನ್ ಹಾಗೂ ಸನ್ನಿ ಲಿಯೋನ್ ಇವರುಗಳು ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದವರು.
ಬಿಬಿಸಿ ಕಳೆದ ನಾಲ್ಕು ವರ್ಷಗಳಿಂದ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಜಗತ್ತನ್ನೇ ಬದಲಿಸಿದ ಶಕ್ತಿಗಳು ಎಂಬ ಧ್ಯೇಯವಾಕ್ಯದಡಿ ಈ ಬಾರಿಯ ಆಯ್ಕೆ ನಡೆದಿದೆ.
ಕಲಾವಿದರು, ಕ್ರೀಡಾಪಟುಗಳು, ಫ್ಯಾಷನ್ ಕ್ಷೇತ್ರದ ಸಾಧಕರು, ಬರಹಗಾರರು, ಸಂಗೀತಗಾರರು, ಇಂಜಿನಿಯರ್ಗಳು, ಉದ್ಯಮಿಗಳು ಹೀಗೆ ವಿವಿಧ ವಿಭಾಗಗಳಲ್ಲಿ ಜಗತ್ತಿನಾದ್ಯಂತ ಇರುವ ಪ್ರಭಾವಿ ಮಹಿಳೆಯರನ್ನು ಗುರುತಿಸಿ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಾಲುಮರದ ತಿಮ್ಮಕ್ಕ ಅವರು ಸಾವಿರಾರು ಮರಗಳನ್ನು ನೆಟ್ಟು ಪ್ರಸಿದ್ಧಿ ಪಡೆದವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ನ ತಿಮ್ಮಕ್ಕ ಅವರು ತಮ್ಮ ಗ್ರಾಮದಲ್ಲಿ ನೂರಾರು ಸಾಲು ಮರಗಳನ್ನು ನೆಟ್ಟು ಜಗತ್ ಪ್ರಸಿದ್ಧಿ ಪಡೆದವರು. ಮರಗಳನ್ನು ಮಕ್ಕಳಂತೆ ಬೆಳೆಸಿ ಸಾಧನೆ ಮಾಡಿದ ಇವರನ್ನು ನೈಜ ಪರಿಸರವಾದಿ ಎಂದು ಬಿಬಿಸಿ ವರ್ಣಿಸಿದೆ. ಇವರು ಬಿಬಿಸಿ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅತಿ ಹಿರಿಯ ಮಹಿಳಾ ಸಾಧಕಿ ಎನ್ನುವುದು ವಿಶೇಷ. ಇವರಿಗೆ 105 ವರ್ಷ.
ಗೌರಿ ಚಿಂದಾರ್ಕರ್ ಅವರು 20 ವರ್ಷದ ಕಂಪ್ಯೂಟರ್ ಇಂಜಿನಿಯರ್ ವಿದ್ಯಾರ್ಥಿನಿಯಾಗಿದ್ದು, ಇವರು ಸ್ವಯಂ ಕಲಿಕಾ ಶಿಕ್ಷಣ ಪದ್ಧತಿ ‘ಸ್ಕೂಲ್ ಇನ್ ದ ಕ್ಲೌಡ್’ ಮೂಲಕ ಕಲಿತು ಸಾಧನೆ ಮಾಡಿದ ಮೊದಲ ಭಾರತೀಯ ವಿದ್ಯಾರ್ಥಿನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಲ್ಲಿಕಾ ಶ್ರೀನಿವಾಸನ್ ಅವರು ಟ್ರ್ಯಾಕ್ಟರ್ ಕ್ವೀನ್ ಎಂದು ಪರಿಚಿತರು. 57 ವರ್ಷದ ಮಲ್ಲಿಕಾ ಶ್ರೀನಿವಾಸನ್ ಅವರು ಚೆನ್ನೈ ಮೂಲದವರು. ಇವರು ತಮ್ಮ ಕುಟುಂಬದ ಕಂಪೆನಿಯನ್ನು ಜಗತ್ತಿನ ಮೂರನೇ ಅತಿ ದೊಡ್ಡ ಟ್ರ್ಯಾಕ್ಟರ್ ಉತ್ಪಾದಕ ಕಂಪೆನಿಯನ್ನಾಗಿ ಬೆಳೆಸಿದ್ದಾರೆ. ಮಹಿಳಾ ಔದ್ಯಮಿಕತೆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಅವರನ್ನು 100 ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ.
ನೇಹಾ ಸಿಂಗ್ ಅವರು ಬರಹಗಾರರು ಮತ್ತು ಚಿತ್ರನಟಿ ಕೂಡಾ. 34 ವರ್ಷದ ನೇಹಾ ಸಿಂಗ್ ಮುಂಬಯಿ ರಸ್ತೆಗಳಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವಂತೆ ಧೈರ್ಯ ನೀಡುವ ಚಳುವಳಿಯೊಂದರ ಸ್ಥಾಪಕರು.
ಸನ್ನಿ ಲಿಯೋನ್ ಅವರು 2013 ರಲ್ಲಿ ಭಾರತ ಚಿತ್ರ ರಂಗವನ್ನು ಪ್ರವೇಶಿಸಿ ಫ್ಯಾಷನ್ ಐಕಾನ್ ಆಗಿ ಖ್ಯಾತಿ ಹೊಂದಿದವರು ಎಂದು ಅವರನ್ನು ಆಯ್ಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.