Tuesday, 20th February 2018
×
Home About Us Advertise With s Contact Us

ನಗರ ವ್ಯಾಪ್ತಿಯಲ್ಲಿ ಕೋಳಿ ಅಂಗಡಿಗಳಿಗೆ ಅನುಮತಿ ಇಲ್ಲ

ಸುಳ್ಯ : ಸುಳ್ಯ ನಗರದ ಒಳಚರಂಡಿಯ ಮ್ಯಾನ್‌ಹೋಲ್‌ಗಳು ತುಂಬಿ ರಸ್ತೆ ತುಂಬೆಲ್ಲ ತ್ಯಾಜ್ಯ ಹರಿದ ಘಟನೆಗೆ ಮುಖ್ಯ ರಸ್ತೆ ಬದಿಯಲ್ಲಿರುವ ಕೋಳಿ ಅಂಗಡಿಗಳಿಂದ ಬಿಡುವ ಕೋಳಿ ತ್ಯಾಜ್ಯವೇ ಮುಖ್ಯ ಕಾರಣ ಎಂದು ಸದಸ್ಯರು ಒಕ್ಕೊರಲಿನಿಂದ ದೂರಿದ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯೊಳಗೆ ಇರುವ ಎಲ್ಲಾ ಕೋಳಿ ಅಂಗಡಿಗಳ ಪರವಾನಿಗೆಯನ್ನು ನವೀಕರಿಸದೆ ಕೋಳಿ ಮಾಂಸ ಮಾರಾಟವನ್ನು ನ.ಪಂ ಮಾರುಕಟ್ಟೆಯಲ್ಲೇ ಮಾಡಲು ಸುಳ್ಯ ನ.ಪಂ ತುರ್ತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

SUL-26MAR-1

ನ.ಪಂ ಅಧ್ಯಕ್ಷ ಎನ್.ಎ. ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಈ ವಿಷಯ ಪ್ರಸ್ತಾಪಿಸಿ ನಗರದಲ್ಲಿರುವ ಒಳಚರಂಡಿಗಳು ಬಂದ್ ಆಗಿ ಸೋರಿಕೆ ಆಗುದಕ್ಕೆ ಮುಖ್ಯರಸ್ತೆಯ ಬದಿಯಲ್ಲಿರುವ ಕೋಳಿ ಅಂಗಡಿಗಳೇ ಕಾರಣ. ಈ ಅಂಗಡಿಗಳಿಂದ ಕೋಳಿಯ ತ್ಯಾಜ್ಯಗಳನ್ನು ಚರಂಡಿಗೆ ಹಾಕುತ್ತಾರೆ. ಇದರಿಂದ ಮ್ಯಾನ್‌ಹೋಲ್ ಬಂದ್ ಆಗಿ ಸೋರಿಕೆ ಆಗಿದೆ ಎಂದರು. ಕೋಳಿ ಅಂಗಡಿಗಳ ಪರವಾನಿಗೆ ಈ ತಿಂಗಳು ಕೊನೆಯಾಗಲಿದೆ. ಮುಂದಿನ ತಿಂಗಳಿನಿಂದ ಹೊಸ ಪರವಾನಿಗೆಗೆ ಅವಕಾಶ ಮಾಡಿಕೊಡಬೇಡಿ ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಅಧ್ಯಕ್ಷರು ಹೊಸ ಪರವಾನಿಗೆ ನೀಡದಂತೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಅಲ್ಲದೇ ಕೋಳಿ ಮಾರಾಟ ವ್ಯವಸ್ಥೆಗೆ ನ.ಪಂ ಮಾರುಕಟ್ಟೆಯಲ್ಲೇ ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಬಂದರು. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು.

ಕಾನೂನು ಸರಳೀಕರಣಕ್ಕೆ ಒತ್ತಾಯ: ಸುಳ್ಯ ಸುಳ್ಯ ಯೋಜನಾ ಪ್ರಾಧಿಕಾರದ ಕಾನೂನು ಸರಳೀಕರಣ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸೂಪದಿಂದ ಮನೆ, ಕಟ್ಟಡ ನಿರ್ಮಾಣ ಮಾಡುವವರಿಗೆ ತೊಂದರೆ ಆಗಿದೆ ಎಂದು ಸದಸ್ಯ ಕೆ.ಎಂ.ಮುಸ್ತಫ ಹೇಳಿದರು. ನಗರ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಲು ಆರಂಭಿಸಿದ ಮೇಲೆ ನ.ಪಂಗೆ ತೆರಿಗೆ ಕಟ್ಟಲೇ ಬೇಕು. ಈಗ ಹಲವಾರು ಕಡೆಯಲ್ಲಿ ಕಟ್ಟಡ ಕಾಮಗಾರಿ ಆರಂಭವಾದರೂ ತೆರಿಗೆ ವಸೂಲಿ ಕಾರ್ಯ ನಡೆಯುತ್ತಿಲ್ಲ. ಕಟ್ಟಡ ಪೂರ್ಣಗೊಳ್ಳಲು ಹಲವು ವರ್ಷಗಳೆ ಕಳೆಯುತ್ತದೆ. ಇದರಿಂದ ನಗರ ಪಂಚಾಯಿತಿಗೆ ನಷ್ಟ ಆಗುತ್ತದೆ ಎಂದು ಮುಸ್ತಫ ಹೇಳಿದರು. ತೆರಿಗೆ ವಿಚಾರವಾಗಿ ಸಂಘಸಂಸ್ಥೆಗಳು, ಸಾರ್ವಜನಿಕರು ಮತ್ತು ವರ್ತಕರ ಸಭೆ ಕರೆಯಬೇಕು ಎಂದು ಪ್ರಕಾಶ್ ಹೆಗ್ಡೆ ಆಗ್ರಹಿಸಿದರು. ಸುಳ್ಯ ನಗರದಲ್ಲಿ ಅಕ್ರಮವಾಗಿ ನೀರನ್ನು ಪಡೆಯುತ್ತಿದ್ದಾರೆ. ಇದನ್ನು ಕೂಡಲೇ ಸಕ್ರಮಗೊಳಿಸಿ ನೀರಿನ ಬಿಲ್‌ನ್ನು ವಸೂಲಿ ಮಾಡಬೇಕು. ಅಲ್ಲದೇ ತ್ಯಾಜ್ಯ ಶುಲ್ಕವನ್ನು ಕೂಡ ವಸೂಲಿ ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಹೇಳಿದರು.

ಸುಳ್ಯ ನಗರದಲ್ಲಿ ರಸ್ತೆಗಳಿಗೆ ಮರು ಡಾಮರಿಕರಣ ಆಗಿಲ್ಲ. ಇನ್ನು ಮಳೆಗಾಲ ಆರಂಭ ಡಾಮರೀಕರಣ ಮಾಡಿದರೆ ಕಳಪೆಯಾಗಿ ಎದ್ದು ಹೋಗುತ್ತದೆ. ಟೆಂಡರ್ ಕೊಡುವಾಗ ಕೂಡ ಒಬ್ಬರಿಗೆ ಎಲ್ಲಾ ಕಾಮಗಾರಿಗಳನ್ನು ಕೊಡಬಾರದು. ಇದರಿಂದ ಕಾಮಗಾರಿ ಕುಂಠಿತಗೊಳ್ಳುತ್ತದೆ. ಟೆಂಡರ್‌ನ್ನು ಹೆಚ್ಚು ಜನರಿಗೆ ಕೊಡಿ ಎಂದು ಗೋಕುಲ್‌ದಾಸ್ ಹೇಳಿದರು. ಇದಕ್ಕೆ ಗಿರೀಶ್ ಕಲ್ಲುಗದ್ದೆ ಕೂಡ ನನ್ನ ವಾರ್ಡಿನಲ್ಲಿ ಟೆಂಡರ್ ಆಗಿ ಮೂರು ವರ್ಷ ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದರು. ಗಾಂಧಿನಗರದಿಂದ ಆಲೆಟ್ಟಿ ಸೇತುವೆ ವರೆಗೆ ಮರು ಡಾಮರೀಕರಣವನ್ನು ಸೋಮವಾರವೇ ಆರಂಭಿಸಬೇಕು ಎಂದು ಅಧ್ಯಕ್ಷರು ಇಂಜಿನಿಯರ್‌ಗೆ ಸೂಚನೆ ನೀಡಿದರು. ನಗರದ ತುರ್ತು ನೀರಾವರಿಗಾಗಿ ೧೫ಲಕ್ಷ ಬಂದಿದ್ದು ಇದನ್ನು ಪ್ರತಿವಾರ್ಡಿಗೆ ಹಂಚಲು ನಿರ್ಧರಿಸಲಾಯಿತು. ಸುಳ್ಯ ನಗರ ವ್ಯಾಪ್ತಿಯಲ್ಲಿ ಗೋಡೆ, ಸೇತುವೆ ಮತ್ತಿತರ ಕಡೆಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲು ಅವಕಾಶ ಇಲ್ಲ. ಪೋಸ್ಟರ್ ಅಂಟಿಸಿದವರ ಮೇಲೆ ಕೇಸು ದಾಖಲು ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ಪೋಸ್ಟರ್ ಹಚ್ಚಿದರೆ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.

ಮುಖ್ಯಾಧಿಕಾರಿ ಚಂದ್ರಕುಮಾರ್, ಉಪಾಧ್ಯಕ್ಷೆ ಮೀನಾಕ್ಷಿ, ಇಂಜಿನಿಯರ್ ಶ್ರೀದೇವಿ, ಸದಸ್ಯರುಗಳಾದ ಪುರುಷೋತ್ತಮ ಬಂಗಾರಕೋಡಿ, ಮುಸ್ತಫ, ಗೋಕುಲ್ ದಾಸ್, ಪ್ರೇಮ ಟೀಚರ್, ಉಮ್ಮರ್, ಶಶಿಕಲಾ, ಚಂದ್ರಕುಮಾರ್, ಶ್ರೀಲತಾ, ರಮಾನಂದ, ಕಿರಣ ಕುರುಂಜಿ, ಶೀಲಾವತಿ, ಸುನಿತಾಮೊಂತೆರೋ, ಸುಲೋಚನಾ, ಗಿರೀಶ್ ಕಲ್ಲುಗದ್ದೆ, ಗೋಪಾಲ ನಡುಬೈಲು, ಹರಿಣಾಕ್ಷಿ ನಾರಾಯಣ, ಜಾನಕಿ ನಾರಾಯಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top