ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿ ಕಾರ್ಪೋರೇಶನ್ (ಎನ್ಪಿಸಿಐ) ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಏಕೀಕೃತ ಪಾವತಿ ಇಂಟರ್ಫೇಸ್) ಅಥವಾ ಯುಪಿಐ ಪಾವತಿ ವ್ಯವಸ್ಥೆಯನ್ನು ಹೊರತಂದಿದೆ.
ಇದು ರಿಸರ್ವ್ ಬ್ಯಾಂಕ್ನ ನಗದು ರಹಿತ ವ್ಯವಹಾರ ಯೋಜನೆಯಾಗಿದೆ. ಪ್ರಸ್ತುತ ದೇಶದ 21 ಬ್ಯಾಂಕ್ಗಳು ಈ ವ್ಯವಸ್ಥೆ ಹೊಂದಿದ್ದು, ಇತರ ಬ್ಯಾಂಕ್ಗಳು ಈ ವ್ಯವಸ್ಥೆಯಡಿ ಬರುವ ಸಾಧ್ಯತೆ ಇದೆ.
ಇದೊಂದು ಮೊಬೈಲ್ ಆ್ಯಪ್ ಆಗಿದ್ದು, ಯುಪಿಐ ಇ-ಮೇಲ್ ಮಾದರಿ ವರ್ಚುವಲ್ ವಿಳಾಸ(virtual address)ದೊಂದಿಗೆ ಗ್ರಾಹಕರನ್ನು ಗುರುತಿಸುತ್ತದೆ. ವರ್ಚುವಲ್ ವಿಳಾಸ ಗ್ರಾಹಕರ ಅಕೌಂಟ್ ಮಾಹಿತಿಗಳನ್ನು ಗೌಪ್ಯವಾಗಿ ಇಡುತ್ತಿದ್ದು, ಮಾಹಿತಿಗಳನ್ನು ನೀಡುವುದಿಲ್ಲ. ಆದ್ದರಿಂದ ಗ್ರಾಹಕರು ಇತರರೊಂದಿಗೆ ಯುಪಿಐ ವಿಳಾಸವನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಯುಪಿಐ ಆ್ಯಪ್ನ್ನು ಗ್ರಾಹಕರು ಡೌನ್ಲೋಡ್ ಮಾಡಬೇಕಿದೆ.
ವರ್ಚುವಲ್ ವಿಳಾಸಕ್ಕೆ ಮೊಬೈಲ್ ಸಂಖ್ಯೆ ಅಥವಾ ಕಿರು ನಾಮವನ್ನು ಬಳಸಹುದು. ಉದಾ:XYZ@icici ಅಥವಾ 123456789@axis
ಯುಪಿಐ ವಿವಿಧ ಬ್ಯಾಂಕ್ಗಳ ಹಲವು ಖಾತೆಗಳಿಗೆ ಅನೇಕ ವರ್ಚುವಲ್ ವಿಳಾಸ ಬಳಸಲು ಅನುಮತಿಸುತ್ತದೆ. ಗ್ರಾಹಕರು ಪ್ರಮಾಣೀಕೃತ ಸುರಕ್ಷತಾ ಪಿನ್ ಸಂಖ್ಯೆ ಹಾಕಿದ ಬಳಿಕವೇ ಪಾವತಿ ಪೂರ್ಣಗೊಳ್ಳುತ್ತದೆ.
ಯುಪಿಐ ವ್ಯವಸ್ಥೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಆನ್ಲೈನ್ ಶಾಪಿಂಗ್, ಶಾಲಾ ಶುಲ್ಕ, ಇತರೆ ವೆಚ್ಚ, ಕೌಂಟರ್ಗಳಿಗೆ ತೆರಳಿ ಬಿಲ್ ಪಾವತಿಸುವ ಬದಲು ನೇರವಾಗಿ ಪಾವತಿ ಮಾಡಬಹುದು.
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಪ್ರಸ್ತುತ ಇರುವ ಐಎಂಪಿಎಸ್ ವ್ಯವಸ್ಥೆಯ ಮುಂದುವರಿದ ಆವೃತ್ತಿಯಾಗಿದ್ದು, ಮೊಬೈಲ್, ಇಂಟರ್ನೆಟ್, ಎಟಿಎಂ ಮೂಲಕ ಭಾರತದಾದ್ಯಂತ ಬ್ಯಾಂಕ್ಗಳ ನಡುವೆ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ ಮಾಡಲು ಸಹಕರಿಸುತ್ತದೆ.
ಯುಪಿಐ ಆ್ಯಪ್ ಮುಂದಿನ 3-4 ದಿನಗಳಲ್ಲಿ ಗ್ರಾಹಕರಿಗೆ ಡೌನ್ಲೋಡ್ ಮಾಡಿ ಕಾರ್ಯ ನಿರ್ವಹಿಸಲು ಲಭ್ಯವಾಗಲಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ಕಾರ್ಪೋರೇಷನ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.