ಇದೇ ಹಿನ್ನಲೆಯಲ್ಲಿ ಕಾರ್ಗಿಲ್ ವಲಯದಲ್ಲಿ ನುಸುಳುಕೋರರನ್ನು ಹಿಂದಿರುಗಿಸಿಕೊಳ್ಳಲು ಅಮೇರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ನವಾಜ್ ಶರೀಫ್ಗೆ ಪತ್ರ ಬರೆದು ಶಿಫಾರಸ್ಸು ಮಾಡಿದರು. ಆದರೆ ಪಾಕ್ ಒಪ್ಪಲಿಲ್ಲ. ಗಡಿ ರೇಖೆ ಸರಿಯಿಲ್ಲ ಎಂಬ ಹೊಸ ತಕರಾರು ಪ್ರಾರಂಭಿಸಿತು.
“ನಿಯಂತ್ರಣ ರೇಖೆ ಅಸ್ಪಷ್ಟವಾಗಿದೆ, ಅದರಾಚೆಗೆ ಅತಿಕ್ರಮಣಕಾರರು ಹೊರನಡೆಯಬೇಕು ಎಂಬುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಹೊಸ ವಾದ ಮಂಡಿಸಿತು.
ಇದನ್ನು ಕಟ್ಟುನಿಟ್ಟಾಗಿ ವಿರೋಧಿಸಿದ ವಾಜಪೇಯಿರವರು “ಇದು ಪೊಳ್ಳುವಾದ. 27 ವರ್ಷಗಳಿಂದ ಈ ರೇಖೆಯಿದೆ, ಈ ಸುದೀರ್ಘ ಅವಧಿಯಲ್ಲಿ ಇಲ್ಲದ ಅಸ್ಪಷ್ಟತೆ ಈಗ ಎಲ್ಲಿಂದ ಬಂದಿತು” ಎಂದು ಖಾರವಾಗಿ ಪ್ರಶ್ನಿಸಿದರು. “ಗಡಿ ನಿಯಂತ್ರಣ ರೇಖೆ ಬದಲಾವಣೆಯ ಮಾತು ನಡೆಯುವುದಿಲ್ಲ. ಅತಿಕ್ರಮಣಕಾರರನ್ನು ತೆರವು ಮಾಡುವುದು ನಿಮ್ಮ ಉದ್ದೇಶವಾಗಿದ್ದರೆ ಭಾರತದ ಬಾಗಿಲು ತೆರೆದಿದೆ” ಎಂದು ಷರೀಫ್ಗೆ ತಿಳಿಸಿದರು. ತಾಯಿನಾಡನ್ನು ಅತಿಕ್ರಮಿಸುವ ಪ್ರತಿಯೊಬ್ಬರನ್ನು ಹೊರಗೆ ಹಾಕುವ ತನಕ ನಮ್ಮ ಸೈನಿಕರು ವಿರಮಿಸುವುದಿಲ್ಲ ಎಂದು ಸ್ಪಷ್ಟಮಾತುಗಳಲ್ಲಿ ತಿಳಿಸಿದರು.
ಕಾರ್ಗಿಲ್ ಬಗ್ಗೆ ಭಾರತದ ಜೊತೆ ಮಾತನಾಡಲು ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಜೂನ್ 12 ಕ್ಕೆ ಬರುವುದೆಂದು ನಿಗದಿಯಾಯಿತು. ಆದರೆ ಅಷ್ಟರಲ್ಲಿ ಅತ್ಯಂತ ಅಮಾನವೀಯ ಬರ್ಬರ ಕೃತ್ಯ ನಡೆದು ಹೋಯಿತು. ಕಾರ್ಗಿಲ್ ಸೇನೆಯ 43 ನೇ ಪೋಸ್ಟ್ನಲ್ಲಿ ಭಾರತೀಯ ಅಧಿಕಾರಿಗಳಿಗೆ ಪಾಕಿಸ್ಥಾನ ಆರು ಮಂದಿ ಭಾರತೀಯ ಸೈನಿಕರ ಶವವನ್ನು ಒಪ್ಪಿಸಿತು. ಅದನ್ನು ಕಂಡ ಎಲ್ಲರೂ ಒಮ್ಮೆಗೆ ದಿಗ್ಭ್ರಾಂತರಾದರು.
ಅಂದು ನಡೆದ ಘಟನೆ ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆದಿರಲಿಲ್ಲ. ಪಾಕಿಸ್ಥಾನದ ಭಯೋತ್ಪಾದಕರು ಕಾರ್ಗಿಲ್ ಬೆಟ್ಟದಲ್ಲಿ ಅಡಗಿ ಕುಳಿತಿದ್ದಾರೆಂಬ ಸುದ್ದಿ ಬಂದ ತಕ್ಷಣ, ಅದರ ಕಾರ್ಯಾಚರಣೆಗೆ ಭಾರತಾಂಬೆಯ ರಕ್ಷಣೆಗೆ ಧಾವಿಸಿದ ವೀರರು ಅವರು. ಸೈನ್ಯದ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಸೌರಭ್ ಕಾಲಿಯ ಮತ್ತು ಅವರ ತಂಡ. ಸೈನಿಕರು ಮೇಲೆ ಬರಲು ಹಿಮ ಕರಗಿದೆಯೇ ಎಂದು ನೋಡಿ ಬರಲು ಬಂದ ಸೌರಭ್ ಕಾಲಿಯಾರ ಪಡೆ, ಪಾಕಿ ಭಯೋತ್ಪಾದಕರು ಅಡಗಿಕೊಂಡಿರುವ ಮಾಹಿತಿಯನ್ನು ಕೆಳಗೆ ತಲುಪಿಸಿತು. ಪಾಪಿಗಳ ವಿರುದ್ಧ ಯುದ್ಧಕ್ಕೆ ಸಜ್ಜಾಗಿ ನಿಂತರು. 150 ಭಯೋತ್ಪಾದಕರನ್ನು ಅಡಗು ತಾಣಗಳಿಂದ ಹೊರಗೆಳೆಯುವುದರಲ್ಲಿ ಯಶಸ್ವಿಯಾಗಿತ್ತು ಈ ತಂಡ. ಆದರೆ ಅಷ್ಟರಲ್ಲಿ ಇವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮುಗಿದು ಹೋದವು. ಪಾಕಿ ಸೈನಿಕರು ಸುತ್ತುವರಿದು ಇವರನ್ನು ಜೀವಂತವಾಗಿ ಹಿಡಿದು ಇಪ್ಪತ್ತೆರಡು ದಿನ ಸೆರೆಯಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದರು. ಅವರ ಕಿವಿಯೊಳಗೆ ಕಬ್ಬಿಣದ ರಾಡ್ನ್ನು ತೂರಲಾಗಿತ್ತು, ಕಣ್ಣು ಕಿತ್ತಿದ್ದರು, ಮೂಗನ್ನೂ ಕತ್ತರಿಸಿದ್ದರು, ಮೂಳೆಗಳನ್ನು ಪುಡಿ-ಪುಡಿ ಮಾಡಿ, ಗುಂಡಿಟ್ಟು ಸಾಯಿಸಿ ಅವರ ದೇಹವನ್ನು ತುಂಡು ತುಂಡು ಮಾಡಿ ಭಾರತಕ್ಕೆ ಕಳಿಸಿಕೊಡಲಾಯಿತು.
ಸೌರಭ್ ಕಾಲಿಯಾರ ದೇಹವನ್ನು ನೋಡಿದ ಸೈನ್ಯ ಬೆಚ್ಚಿಬಿದ್ದಿತು. ಈ ಆರು ವೀರ ಯೋಧರ ಶವ ದೊರೆತಾಗ ಇಡೀ ವಿಶ್ವವೇ ದುರಂತ ಪೈಶಾಚಿಕತೆಗೆ ಸಾಕ್ಷಿಯಾಯಿತು.
1971 ರ ಯುದ್ಧ ಸಂದರ್ಭದಲ್ಲಿ ಭಾರತೀಯ ಸೈನ್ಯ 93 ಸಾವಿರ ಪಾಕ್ ಸೈನಿಕರನ್ನು ಪೂರ್ವ ವಲಯದಲ್ಲಿ ಸೆರೆ ಹಿಡಿದಿತ್ತು. ಆದರೆ ಅವರನ್ನು ಯಾವ ತೊಂದರೆಯೂ ಇಲ್ಲದೆ ಮರಳಿ ಕಳುಹಿಸಿಕೊಡಲಾಗಿತ್ತು. ಭಾರತ ಅಂದು ತೋರಿತ್ತು ಔದಾರ್ಯ. ಪಾಕಿಸ್ಥಾನ ಇಂದು ಪ್ರತಿಯಾಗಿ ತೋರಿತು ಕ್ರೌರ್ಯ. ಔದಾರ್ಯಕ್ಕೆ ಕ್ರೌರ್ಯದ ಉತ್ತರ.
ಈ ಸೈನಿಕರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅವರನ್ನು ಅತ್ಯಂತ ಅಮಾನವೀಯವಾಗಿ ಹಿಂಸೆ ಮಾಡಿ ಕೊಲ್ಲಲಾಗಿದೆ ಎಂಬುದು ಧೃಡ ಪಟ್ಟಿತು.
ಆದರೆ ಪಾಕಿಸ್ಥಾನ ತನ್ನ ಉದ್ಧಟತನವನ್ನು ಮುಂದುವರಿಸುತ್ತಲೇ ಇತ್ತು. ಪಾಕಿಸ್ಥಾನದ ಸೇನಾ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕ ಭಾರತಕ್ಕೆ ಹೇಳಿದ್ದೇನು ಗೊತ್ತೇ? “ನಮ್ಮ ವಶದಲ್ಲಿ ಭಾರತೀಯ ಸೈನಿಕರಾರು ಇಲ್ಲ”. ಎಂದು ಅಪ್ಪಟ ಸುಳ್ಳು ಹೇಳಿಕೆಯನ್ನು ನೀಡಿತ್ತು ಪಾಕಿಸ್ಥಾನ. ಆ ಹೇಳಿಕೆ ನೀಡುವಾಗಲು ಆ ಆರು ಮಂದಿ ಸೈನಿಕರು ಅವರ ವಶದಲ್ಲಿದ್ದರು. ” ಇದೊಂದು ಮಧ್ಯಯುಗೀನ ಬರ್ಬರ ಕೃತ್ಯ. ನನ್ನನ್ನೇ ಹಿಂಸೆಗೆ ಗುರಿಪಡಿಸುವಷ್ಟು ಯಾತನೆ ನನಗಾಗುತ್ತಿದೆ” ಎಂದು ಭಾರತಿಯ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ತಿಳಿಸಿದರು. ಇಡೀ ದೇಶವೇ ಈ ಕೃತ್ಯವನ್ನು ಓದಿ, ಕೇಳಿ ಕಣ್ಣೀರಿಟ್ಟಿತು…