ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ದಾನ,ಧರ್ಮಗಳಿಗೆ, ಜನೋಪಯೋಗಿ ವಿವಿಧ ಯೋಜನೆಗಳಿಗೆ ನಾಡಿನಾದ್ಯಂತ ಪ್ರಸಿದ್ದ. ಕ್ಷೇತ್ರದ ಹಲವಾರು ಪರಂಪರೆಗಳಲ್ಲಿ ಪ್ರತೀ ವರ್ಷ ನಡೆಯುವ ಸಾಮೂಹಿಕ ಉಚಿತ ವಿವಾಹವೂ ಒಂದು. ಈ ಪವಿತ್ರ ಕಾರ್ಯಕ್ಕೆ ಇದೀಗ 45 ವರ್ಷಗಳ ಇತಿಹಾಸ.
ಅನಗತ್ಯ ವೆಚ್ಚ ಕಡಿತಗೊಳಿಸಿ, ಸರಳ ರೀತಿಯಲ್ಲಿ ಶಾಸ್ತ್ರೋಕ್ತ ಮದುವೆ ನಡೆಸಲು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹದ ಪರಿಕಲ್ಪನೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ 1972 ರಲ್ಲಿ ಹೊಳೆದದ್ದೇ ಈ ಯೋಜನೆ. ಬಡತನದ ಬೇಗೆಯಲ್ಲಿ ಬೇಯುವ ಕುಟುಂಬಗಳಿಗೆ ಸಾಂತ್ವನವಾಗಿ, ವರದಾನವಾಗಿ ಮೂಡಿಬಂದ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರೇರಣೆಯಿಂದ ಇಂದು ನಾಡಿನ ವಿವಿಧ ಸಂಘ, ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಅನುಸರಿಸುತ್ತಾ ಬರುತ್ತಿವೆ.
ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗಳ ವಧೂವರರು ಇಲ್ಲಿ ದಾಂಪತ್ಯ ಪ್ರವೇಶಿಸುತ್ತಿದ್ದಾರೆ. 1972 ರ ಮಾರ್ಚ್ 29ರಂದು ನಡೆದ ಪ್ರಥಮ ಸಾಮೂಹಿಕ ವಿವಾಹದಲ್ಲಿ 88 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣವಾಯಿತು. ಅಲ್ಲಿಂದೀಚೆಗೆ 2015ರ ವರೆಗೆ ಕ್ಷೇತ್ರದಲ್ಲಿ ಒಟ್ಟು 11800 ಜೋಡಿ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯ ಆಶೀರ್ವಾದದಿಂದ ವೈವಾಹಿಕ ಬದುಕನ್ನು ಕಂಡುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹಿಂದೂ ಧರ್ಮದ ಎಲ್ಲ ಜಾತಿಯವರು ಇಲ್ಲಿ ವಿವಾಹವಾಗುತ್ತಿರುವುದು ವೈಶಿಷ್ಟ್ಯ.
ಸರಳ ವಿವಾಹ : ಮದುವೆ ಖರ್ಚು ಭರಿಸಲು ಸಾಧ್ಯವಾಗದ ಕುಟುಂಬಗಳಿಗೆ ನೆರವಾಗುವ ಉದ್ಧೇಶವೂ ಇದರ ಹಿಂದೆ ಇದೆ. ವೈವಾಹಿಕ ವೆಚ್ಚ ಖಡಿತಗೊಳಿಸುವಾಗ ಧಾರ್ಮಿಕ ವಿಧಿಗಳಿಗೆ ಚ್ಯುತಿಯಾಗದಂತೆ, ಸಾಂಸ್ಕೃತಿಕ ಪಾವಿತ್ರ್ಯವೂ ಉಳಿಯುವಂತೆ ನೋಡಿಕೊಳ್ಳಲಾಗಿದೆ. ಹಿರಿಯರ ಶುಭ ಹಾರೈಕೆಯೊಂದಿಗೆ ಎಲ್ಲರಿಗೂ ಒಪ್ಪುವಂತೆ ವಿಧಿ ವಿಧಾನಗಳು ನೆರವೇರಬೇಕು ಎಂಬುದನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಎರಡನೇ ವಿವಾಹಕ್ಕೆ ಇಲ್ಲಿ ಆಸ್ಪದವಿಲ್ಲ. ಕರಿಮಣಿ ತಾಳಿ, ವಧುವಿಗೆ ಸೀರೆ, ರವಿಕೆ ಕಣ, ವರನಿಗೆ ಶಾಲು, ಧೋತಿ, ಶರ್ಟ್ ಪೀಸ್ ಕ್ಷೇತ್ರದ ವತಿಯಿಂದ ನೀಡಲಾಗುತ್ತದೆ. ಊಟೋಪಚಾರ, ವಾಲಗ, ಮಂಟಪ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಆರ್ಥಿಕ ಸಂಕಷ್ಟ, ಅನಕ್ಷರತೆ, ಬೇರೆ ಬೇರೆ ರೀತಿಯ ಸಾಮಾಜಿಕ ಸಮಸ್ಯೆಗಳಿಂದಾಗಿ ಸಾಮಾನ್ಯ ಜನರಿಗೆ ವಿವಾಹದ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸುವುದು ಕಷ್ಟವಾಗಿರುವಾಗ ಈ ದಿನಗಳಲ್ಲಿ ವಿವಾಹದ ಜತೆ ಅಂಟಿಕೊಂಡಿರುವ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಆರ್ಥಿಕವಾಗಿ ಹಿಂದುಳಿದವರನ್ನು ಚಿಂತೆಯಿಂದ ಪಾರು ಮಾಡಲು ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹ ಮಾದರಿಯಾಗಿದೆ.