ಬೆಂಗಳೂರು : ಸಿಐಡಿ ಅಧಿಕಾರಿಗಳಾದ ಡಿಜಿಪಿ ಸೋನಿಯಾ ನಾರಂಗ್ ಮತ್ತು ಎಸ್.ಪಿ. ಮಧುರವೀಣಾ ನಡುವೆ ಕಿತ್ತಾಟ ಶುರುವಾಗಿದ್ದು, ಮಧುರವೀಣಾ ಈ ಬಗ್ಗೆ ಗೃಹ ಸಚಿವರಿಗೆ ಪತ್ರವನ್ನು ಬರೆದು ಸೋನಿಯಾ ನಾರಂಗ್ ವಿರುದ್ಧ ದೂರು ನೀಡಿದ್ದಾರೆ.
ಖಾಸಗಿ ಹೋಟೆಲ್ನ ರೈಡ್ಗೆ ಸಂಬಂಧಿಸಿದಂತೆ ಸೋನಿಯಾ ನಾರಂಗ್ ಎಸ್.ಪಿ. ಮಧುರವೀಣಾ ಲಂಚ ಸ್ವೀಕೃತಿ ಆರೋಪದ ವಿರುದ್ಧ ತನಿಖೆ ನಡೆಸುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಮಧುರವೀಣಾ ಸೋನಿಯಾ ನಾರಂಗ್ ವಿರುದ್ಧ ದೂರನ್ನು ನೀಡಿದ್ದಾರೆ.
ಎಸ್.ಪಿ. ಮಧುರವೀಣಾ ಗೃಹಸಚಿವರಿಗೆ 5 ಪುಟಗಳ ದೂರನ್ನು ಸಲ್ಲಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳಿಗೆ ಕಿರುಕುಳವನ್ನು ಸೋನಿಯಾ ನಾರಂಗ್ ಅವರು ನೀಡುತ್ತಿದ್ದಾರೆ. ಅವರು ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾರ್ಯಾಚರಿಸಲು ಬಿಡುವುದಿಲ್ಲ. ಕೆಲಸವನ್ನು ಸೂಕ್ತ ರೀತಿಯಲ್ಲಿ ಮಾಡಲು ಬಿಡುವುದಿಲ್ಲ ಎಂದು ಅವರು ದೂರಿದ್ದಾರೆ.
ಅಲ್ಲದೇ ಇವರಿಂದ ಕಿರುಕುಳಕ್ಕೊಳಗಾದ ಅಧಿಕಾರಿಗಳ ಹೆಸರನ್ನು ನಮೂದಿಸಿದ್ದು, ಈಗ ನಾನು ಮುಂಭಡ್ತಿ ಪಡೆಯುವ ಅವಕಾಶವಿದ್ದು, ಅದನ್ನು ತಪ್ಪಿಸುವ ಸಲುವಾಗಿ ಲಂಚದ ಆರೋಪ ಹೊರಿಸಲಾಗಿದೆ. ಆದುದರಿಂದ ತಾವು ತುರ್ತು ಕ್ರಮ ಜರುಗಿಸಬೇಕಾಗಿ ಗೃಹಸಚಿವರನ್ನು ಪತ್ರಮುಖಾಂತರ ಕೋರಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಆರೋಪಿಗಳನ್ನು ಸೋನಿಯಾ ನಾರಂಗ್ ಮುಂದಾಳತ್ವದಲ್ಲಿ ಭೇದಿಸಿದ್ದು, ಹಲವು ಸತ್ಯಗಳು ಹೊರಬಿದ್ದಿದೆ. ಸೋನಿಯಾ ನಾರಂಗ್ ಕೈಕಟ್ಟಿಹಾಕಲು ಈ ಪ್ರಕರಣ ಮೂಡಿ ಬಂದಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆ.