ನ್ಯೂಯಾರ್ಕ್: ಗುಜರಾತ್ನ ಮಹಾರಾಜ ಜಾಮ್ಸಾಹೇಬ್ ದಿಗ್ವಿಜಯ್ಸಿಂಗ್ಜಿ ರಂಜಿತ್ಸಿಂಗ್ಜಿ ತಮ್ಮ ಸಹಾನುಭೂತಿಯಿಂದ ಪೋಲ್ಯಾಂಡ್ನ 1000 ನಿರಾಶ್ರಿತ ಮಕ್ಕಳಿಗೆ ಆಶ್ರಯ ನೀಡಿ ಸಲಹಿದ ರೀತಿಯ ಚಿತ್ರ ಪ್ರದರ್ಶನ ವಿಶ್ವ ಸಂಸ್ಥೆಯಲ್ಲಿ ಮುಂದಿನ ವಾರ ಪ್ರದರ್ಶನಗೊಳ್ಳಲಿದೆ. ಅವರ ಈ ಕಾರ್ಯಕ್ಕಾಗಿ ವಿಶ್ವಸಂಸ್ಥೆ ಮರಣೋತ್ತರವಾಗಿ ಗೌರವ ಪ್ರದಾನ ಮಾಡಲಿದೆ.
ನ್ಯೂಯಾರ್ಕ್ನಲ್ಲಿ ಸೈಯದ್ ಅಕ್ಬರುದ್ದಿನ್ ನೇತೃತ್ವದಲ್ಲಿ ’ಪ್ಯಾಸೇಜ್ ಟು ಇಂಡಿಯಾ: ದ ವಾರ್ಟೈಮ್ ಒಡಿಸ್ಸಿ ಆಫ್ ಪಾಲಿಷ್ ಚಿಲ್ಡ್ರನ್ ಆಂಡ್ ದ ಗುಡ್ ಮಹಾರಾಜ’ ಎಂಬ ಚಿತ್ರ ಪ್ರದರ್ಶನವನ್ನು ಎ.22ರಂದು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪೋಲ್ಯಾಂಡ್ ರಾಷ್ಟ್ರದ ಪ್ರಧಾನಿ ಬೀಟಾ ಝೈಡೊ ಹಾಗೂ ಭಾರತದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭಾಗವಹಿಸಲಿದ್ದಾರೆ.
ಪೋಲ್ಯಾಂಡ್ನಿಂದ ಗಡೀಪಾರು ಮಾಡಲಾದ 1000 ಮಕ್ಕಳನ್ನು 1941-42ರಲ್ಲಿ ಭಾರತಕ್ಕೆ ಕರೆತರಲಾಗಿದ್ದು, ಗುಜರಾತ್ನ ಅಂದಿನ ಮಹಾರಾಜ ಜಾಮ್ಸಾಹೇಬ್ ದಿಗ್ವಿಜಯ್ಸಿಂಗ್ಜಿ ರಂಜಿತ್ಸಿಂಗ್ಜಿ ನವನಗರದ ಬಾಲಾಚಡಿಯಲ್ಲಿ ಆಶ್ರಯ ನೀಡಿದ ಕಥೆಯನ್ನು ಪ್ರದರ್ಶಿಸಲಾಗುತ್ತಿದೆ.
ವಿಶ್ವದಲ್ಲಿ ನಿರಾಶ್ರಿತರು ಹಾಗೂ ವಲಸಿಗರು ಆಶ್ರಯ ಪಡೆಯಲು ಅಲೆದಾಡುತ್ತಿದ್ದಾರೆ, ಹಲವು ರಾಷ್ಟ್ರಗಳ ಮಾನವೀಯತೆ ಹಾಗೂ ಸ್ನೇಹದಿಂದ ಈ ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸಬೇಕು ಎಂದು ಸೈಯದ್ ಅಕ್ಬರುದ್ದಿನ್ ಹೇಳಿದ್ದಾರೆ.