Friday, April 1st, 2016
Admin
ರಾಜ್ಕೋಟ್: ಪಾಕಿಸ್ಥಾನ ನೌಕಾ ಪಡೆ ಗುಜರಾತ್ ಕರಾವಳಿ ತೀರಾ ಪ್ರದೇಶದಿಂದ 55 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಬಳಿಯಿದ್ದ 10 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಗುರುವಾರ ಮುಂಜಾನೆ ಈ ಮೀನುಗಾರರು ಪಶ್ಚಿಮ ತೀರದ ಅರೆಬಿಯನ್ ಕಡಲ ತೀರದ ಅಂತಾರಾಷ್ಟ್ರೀಯ ಸಾಗರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ಈ ಮೀನುಗಾರರು ತಮ್ಮ ನೀರಿನಲ್ಲಿ ಮೀನುಗಾರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪಾಕ್ ಅಧಿಕಾರಿಗಳು ಬಂಧಿಸಿದ್ದಾರೆ.
ಪಾಕಿಸ್ಥಾನ ವಶಪಡಿಸಿಕೊಂಡಿರುವ 10 ದೋಣಿಗಳ ಪೈಕಿ 5 ಒಕ್ಹಾ ಮೋರಿ ಮತ್ತು 5 ಮಂಗ್ರೋಲ್ ಮೀನುಗಾರಿಕಾ ಘಟಕಕ್ಕೆ ಸೇರಿದ್ದು ಎಂದು ರಾಷ್ಟ್ರೀಯ ಮೀನು ಕಾರ್ಮಿಕರ ವೇದಿಕೆಯ ಕಾರ್ಯದರ್ಶಿ ಮನೀರ್ಶ ಲೋದರಿ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಪಾಕಿಸ್ಥಾನ ತನ್ನ ವಶದಲ್ಲಿದ್ದ 86 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿತ್ತು, ಪ್ರಸ್ತುತ ಪಾಕಿಸ್ಥಾನದಲ್ಲಿ 350ಕ್ಕೂ ಅಧಿಕ ಮೀನುಗಾರರು ಇರುವ ಸಾಧ್ಯತೆ ಇದೆ.