News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫತ್ವಾ ವಿರುದ್ಧ ಸುಪ್ರೀಂಕೋರ್ಟ್ ಪ್ರಹಾರ

fatwa-300x225ಉದ್ಯೋಗಸ್ಥ ಮಹಿಳೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆಯುವಂತಿಲ್ಲ. ಸ್ತ್ರೀಯರು ಬುರ್ಖಾ ಧರಿಸಲೇಬೇಕು. ಮೊಬೈಲ್ ಫೋನ್ ಮೂಲಕ ಮೂರು ಬಾರಿ ತಲಾಖ್ ಹೇಳಿದರೂ ವಿವಾಹ ವಿಚ್ಛೇದನ ಸಿಂಧು ಆಗುತ್ತದೆ. ಮಹಿಳೆಯರು ಖಾಜಿ ಅಥವಾ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಭಾವೀ ಪತ್ನಿ (ಪತಿ)ಯೊಂದಿಗೆ ಫೋನ್‌ನಲ್ಲಿ ಮಾತನಾಡುವುದು ನಿಷಿದ್ಧ. ೧೩ ವರ್ಷ ದಾಟಿದ ಹರಿಹರೆಯದ ಬಾಲಕಿಯರು ಸೈಕಲ್ ಸವಾರಿ ಮಾಡುವಂತಿಲ್ಲ. ಮಹಿಳೆಯರು ಕಾರು ಚಲಾಯಿಸುವಂತಿಲ್ಲ. ಮಹಿಳೆಯರು ಚುನಾವಣೆಗೆ ಸ್ಪರ್ಧಿಸಕೂಡದು. ಸಹ ಶಿಕ್ಷಣಕ್ಕೆ ಅನುಮತಿ ಇಲ್ಲ. ಟಿವಿಯಲ್ಲಿ ವ್ಯಂಗ್ಯಚಿತ್ರ ನೋಡುವುದು ಕಾನೂನುಬಾಹಿರ. ಮಾಡೆಲಿಂಗ್ ಮತ್ತು ಅಭಿನಯಗಳು ಅಪರಾಧ. ರಕ್ತದಾನ ಹಾಗೂ ಲಿಂಗಗಳ ದಾನ ನಿಷಿದ್ಧ. ಛಾಯಾಗ್ರಹಣ ಒಂದು ಪಾಪಕೃತ್ಯ. ಪ್ರವಾದಿ ಮಹಮ್ಮದರ ಬಗ್ಗೆ ನಿಂದನೆಯ ಮಾತು ಆಡಿದವರನ್ನು ಕೊಂದು ಹಾಕಬೇಕು…

ಕ್ಷಮಿಸಿ, ಇವೆಲ್ಲ ನಮ್ಮ ದೇಶದ ಯಾವುದೇ ನ್ಯಾಯಾಲಯ ನೀಡಿದ ತೀರ್ಪುಗಳಲ್ಲ. ಆದರೆ ಇವೆಲ್ಲ ಮುಸ್ಲಿಮರ ಶರಿಯತ್ ನ್ಯಾಯಾಲಯಗಳು ಆಗಾಗ ಹೊರಡಿಸಿರುವ ಫತ್ವಾಗಳು! ಫತ್ವಾಗಳೆಂದರೆ ಇಸ್ಲಾಮಿಕ್ ಶಾಸನಾತ್ಮಕ ಅಭಿಪ್ರಾಯಗಳು ಅಥವಾ ಮೌಲ್ವಿಗಳ ಆದೇಶಗಳು. ಅದನ್ನು ಪಾಲಿಸಲೇಬೇಕು. ಪಾಲಿಸದಿದ್ದರೆ ಅಂಥವರಿಗೆ ಶಿಕ್ಷೆ ಖಚಿತ ಹಾಗೂ ಉಚಿತ. ಈ ಫತ್ವಾಗಳ ವಿರುದ್ಧ ಇದೀಗ ಮುಸ್ಲಿಂ ಸಮಾಜದಲ್ಲೇ ಅಪಸ್ವರಗಳು ಎದ್ದಿರುವುದೂ ರಹಸ್ಯವಲ್ಲ.

ಆದರೆ ಇದೀಗ ದೇಶದ ಸುಪ್ರೀಂಕೋರ್ಟ್ ಇಂತಹ ಫತ್ವಾಗಳನ್ನು ಹೊರಡಿಸುವ ಪದ್ಧತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ಮುಸ್ಲಿಂ ಧಾರ್ಮಿಕ ನಾಯಕರು ನಡೆಸುವ ಶರಿಯತ್ ನ್ಯಾಯ ಪಂಚಾಯತಿಗಳಿಗೆ (ದಾರುಲ್ ಖ್ವಾಜಾ) ಹಾಗೂ ಅವು ಹೊರಡಿಸುವ ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂಬುದು ಸುಪ್ರೀಂಕೋರ್ಟ್ ತೀರ್ಪಿನ ಸಾರ. ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲದ ಕಾರಣ ಅವುಗಳನ್ನು ಜಾರಿಯಲ್ಲಿ ತರಲು ಬಲ ಪ್ರಯೋಗಿಸುವಂತಿಲ್ಲ. ಯಾರಾದರೂ ಫತ್ವಾಗಳನ್ನು ಜಾರಿಗೊಳಿಸಲು ಬಲವಂತವಾಗಿ ಯತ್ನಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತನ್ನ ೨೦ ಪುಟಗಳ ತೀರ್ಪಿನಲ್ಲಿ ವಿವರಿಸಿದೆ.

ಶರಿಯತ್ ನ್ಯಾಯ ಪಂಚಾಯ್ತಿಗಳ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ವಕೀಲರಾದ ವಿಶ್ವಲೋಚನ್ ಮದನ್ ಅವರು ೨೦೦೫ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಇತ್ಯರ್ಥಗೊಳಿಸುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಮಹತ್ತರ ತೀರ್ಪು ನೀಡಿದೆ.

ಈ ಶರಿಯತ್ ನ್ಯಾಯ ಪಂಚಾಯಿತಿಗಳು ದೇಶದಲ್ಲಿ ಪರ್ಯಾಯ ನ್ಯಾಯ ವ್ಯವಸ್ಥೆಯಾಗಿವೆ. ಇವು ಫತ್ವಾ ಹೊರಡಿಸುವ ಮೂಲಕ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುವ, ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಅರ್ಜಿದಾರರು ದೂರಿದ್ದರು. 2 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿತ್ತು. ಮಾವನೇ ತನ್ನ ಸೊಸೆ ಇಮ್ರಾನಾ ಎಂಬವಳ ಮೇಲೆ ಅತ್ಯಾಚಾರ ಎಸಗಿದ್ದ ಈ ಪ್ರಕರಣ ಮುಸ್ಲಿಂ ಪಂಚಾಯತ್ (ಅದನ್ನು ಕಾಫ್ ಪಂಚಾಯತ್ ಎಂದೂ ಕರೆಯುತ್ತಾರೆ) ಮೆಟ್ಟಿಲು ಹತ್ತಿದಾಗ ಅಲ್ಲಿನ ಮುಖ್ಯಸ್ಥರು ನೀಡಿದ ತೀರ್ಪು ಮಾನವೀಯತೆಯೇ ನಾಚಿ ತಲೆತಗ್ಗಿಸುವಂತಿತ್ತು. ಆ ತೀರ್ಪಾದರೂ ಏನು? ತನ್ನ ಮೇಲೆ ಅತ್ಯಾಚಾರ ಎಸಗಿದ ಮಾವನ ಜೊತೆಗೆ ಇಮ್ರಾನಾ ವಾಸಿಸಬೇಕು. ಗಂಡ ಮತ್ತು ಮಕ್ಕಳನ್ನು ತೊರೆಯಬೇಕು. ಅಸಲಿಗೆ ಅತ್ಯಾಚಾರ ನಡೆಸಿದ್ದು ತನ್ನ ಪತಿಯ ತಂದೆಯಾಗಿದ್ದ ತನ್ನ ಮಾವ. ಇದರಲ್ಲಿ ಸೊಸೆಯ ಪಾತ್ರ ಏನೇನೂ ಇರಲಿಲ್ಲ. ವಾಸ್ತವವಾಗಿ ಕಾನೂನು ಪ್ರಕಾರ ಶಿಕ್ಷೆಯಾಗಬೇಕಾದುದು ಮಾವನಿಗೆ. ಏಕೆಂದರೆ ಆತ ಸೊಸೆಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿದ್ದ. ಮಗಳಿಗೆ ಸಮಾನವಾಗಿ ಸೊಸೆಯನ್ನು ಕಾಣಬೇಕಿದ್ದ ಆ ಮಾವನ ಕೆಟ್ಟ ಕಾಮದ ದೃಷ್ಟಿ ಸೊಸೆಯ ಮೇಲೆ ಎರಗಿತ್ತು. ಆದರೆ ಶರಿಯತ್ ಪಂಚಾಯ್ತಿ ಅತ್ಯಾಚಾರವೆಸಗಿದ ಮಾವನ ಜೊತೆಗೇ ಸೊಸೆ ವಾಸ ಮಾಡಬೇಕೆಂದು ಯಾವ ಆಧಾರದಲ್ಲಿ ತೀರ್ಪು ಕೊಟ್ಟಿತೋ ಆ ಪಂಚಾಯತ್ ಪ್ರಮುಖರೇ ಹೇಳಬೇಕು. ಇತ್ತ ನಿರಪರಾಧಿ ಸೊಸೆ ಇಮ್ರಾನಾಗೆ ಶರಿಯತ್ ಪಂಚಾಯ್ತಿ ನೀಡಿದ್ದು ನ್ಯಾಯದಾನವನ್ನಲ್ಲ , ಅನ್ಯಾಯವನ್ನು ಎಂಬುದು ಮಾನವೀಯತೆ ಇರುವ ಯಾರಿಗಾದರೂ ಅರ್ಥವಾಗುವ ಸಂಗತಿ.

ಈ ತೀರ್ಪಿನ ವಿರುದ್ಧ ಇಡೀ ಮುಸ್ಲಿಂ ಸಮಾಜದಲ್ಲಿ ಅಲ್ಲೋಲಕಲ್ಲೋಲ ಆಗಬೇಕಿತ್ತು. ಆದರೆ ಅಲ್ಲೊಂದು ಇಲ್ಲೊಂದು ಪ್ರತಿಭಟನೆಯ ಕ್ಷೀಣ ಅಪಸ್ವರ ಕೇಳಿಬಂದಿದ್ದು ಬಿಟ್ಟರೆ ಇದೊಂದು ಸಾಮಾನ್ಯ ಘಟನೆಯಾಗಿ ಮರೆಯಾಗಿ ಹೋಗಿದ್ದು ಎಂತಹ ವಿಪರ್ಯಾಸ! ಇದೊಂದು ಬೆಳಕಿಗೆ ಬಂದ ಘಟನೆ. ಬೆಳಕಿಗೇ ಬಾರದ ಇಂತಹ ಅದೆಷ್ಟೋ ಘಟನೆಗಳು ನಡೆದಿರಬಹುದು. ಇಮ್ರಾನಾಳಂತಹ ಅದೆಷ್ಟೋ ಮುಗ್ಧ ಮುಸ್ಲಿಂ ಮಹಿಳೆಯರು ತಮ್ಮದಲ್ಲದ ತಪ್ಪಿಗೆ ಫತ್ವಾದ ಅಣತಿಯನ್ನು ಪಾಲಿಸುವ ದೌರ್ಭಾಗ್ಯಕ್ಕೆ ಒಳಗಾಗಿರಬಹುದು. ಅಂಥ ಮಹಿಳೆಯರ ಸಂಕಟಗಳಿಗೆ ಧ್ವನಿವರ್ಧಕ ಆಗುವವರು ಯಾರು? ಸುಪ್ರೀಂಕೋರ್ಟ್ ಇದೀಗ ನೀಡಿರುವ ತೀರ್ಪು ಇಂಥವರ ಪಾಲಿಗೆ ಒಂದು ಆಶಾಕಿರಣ ಆಗಬಹುದು.

ಪ್ರಮುಖ ಫತ್ವಾಗಳು
ಶರಿಯತ್ ಕೋರ್ಟುಗಳು ತಮಗೆ ಬೇಕಾದಂತೆ ಅನೇಕ ಫತ್ವಾಗಳನ್ನು ಇದುವರೆಗೆ ಹೊರಡಿಸಿವೆ. ಆ ಫತ್ವಾಗಳಿಂದ ಮುಸ್ಲಿಂ ಧರ್ಮ ರಕ್ಷಣೆ ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎಂಬುದನ್ನು ಮುಸ್ಲಿಂ ಪ್ರಾಜ್ಞರೇ ಹೇಳಬೇಕಷ್ಟೆ. ಕೆಲವು ಪ್ರಮುಖ ಫತ್ವಾಗಳು ಹೀಗಿವೆ:

ಪಾಕಿಸ್ಥಾನದಲ್ಲಿ ಹೆಣ್ಣು ಮಕ್ಕಳೂ ಶಾಲೆಗೆ ಬರಬೇಕೆಂದು ಪ್ರೇರೇಪಿಸಿದ್ದಕ್ಕೆ ಮಲಾಲಾ ಯೂಸುಫ್ ಝಾಯ್ ಎಂಬ ಬಾಲಕಿಯ ವಿರುದ್ಧ ಧರ್ಮ ಗುರು ಶೇಕ್ ಒಮರ್ ಬಕ್ರಿಯಿಂದ ಫತ್ವಾ. ಮಲಾಲಾ ಮೇಲೆ ಉಗ್ರರು ಗುಂಡು ಹಾರಿಸಿ, ಆಕೆ ಗಾಯಗೊಂಡು, ಅನಂತರ ವಿದೇಶದ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಂಡು ಮತಾಂಧರ ವಿರುದ್ಧ ಮತ್ತಷ್ಟು ಗಟ್ಟಿ ಧ್ವನಿ ಮೊಳಗಿಸಿದ್ದು ಈಗ ಇತಿಹಾಸ.

ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟವರ ವಿರುದ್ಧ ಮೀರತ್‌ನ ಮೌಲ್ವಿಯಿಂದ ಫತ್ವಾ. ಆದರೆ ಈ ಫತ್ವಾಕ್ಕೆ ಅಷ್ಟಾಗಿ ಯಾರೂ ಹೆದರಿಕೊಳ್ಳಲಿಲ್ಲ.

ಶಾರ್ಟ್ ಸ್ಕರ್ಟ್ ಧರಿಸಿದ್ದಕ್ಕಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿರುದ್ಧ ಧರ್ಮಗುರು ಹಸೀಬುಲ್ ಹಸನ್ ಸಿದ್ದೀಕಿಯಿಂದ ಫತ್ವಾ. ಆದರೆ ಈ ಫತ್ವಾವನ್ನು ಇಡೀ ಟೆನಿಸ್ ಜಗತ್ತಷ್ಟೇ ಅಲ್ಲ , ಉಳಿದ ಪ್ರಜ್ಞಾವಂತರೂ ಖಂಡಿಸಿದರು. ಸ್ವತಃ ಮುಸ್ಲಿಂ ಪ್ರಜ್ಞಾವಂತರೂ ಈ ಫತ್ವಾವನ್ನು ವಿರೋಧಿಸಿದರು. ಶಾರ್ಟ್ ಸ್ಕರ್ಟ್ ಹಾಕದೆ ಬುರ್ಖಾ ಹಾಕಿಕೊಂಡು ಟೆನಿಸ್ ಆಡಲು ಸಾಧ್ಯವೆ ಎಂದು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ ಕೂಡ ಆಗ ನಡೆದಿತ್ತು. ಕೊನೆಗೂ ಈ ಫತ್ವಾದ ಬಿಸಿ ಆರಿ ಹೋಗಿ, ಸಾನಿಯಾ ಮಿರ್ಜಾ ಈಗಲೂ ಶಾರ್ಟ್ ಸ್ಕರ್ಟ್ ಧರಿಸಿಯೇ ಟೆನಿಸ್ ಆಡುತ್ತಿರುವುದು ವರ್ತಮಾನದ ಸತ್ಯ.

ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಿತಿಗತಿಯನ್ನು ಯಥಾವತ್ತಾಗಿ ಅನಾವರಣ ಮಾಡಿದ ಲೇಖಕಿ ತಸ್ಲೀಮಾ ನಸ್ರೀನ್ ವಿರುದ್ಧ ಬಾಂಗ್ಲಾ ಮೂಲಭೂತವಾದಿಗಳಿಂದ ಫತ್ವಾ. ಈ ಫತ್ವಾ ಸಾಕಷ್ಟು ಗದ್ದಲ ಎಬ್ಬಿಸಿತ್ತು. ತಸ್ಲೀಮಾ ನಿಲ್ಲಲು ನೆಲೆಯಿಲ್ಲದೆ ಎಲ್ಲೆಲ್ಲೋ ಅಂಡಲೆದು, ಕೊನೆಗೆ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಆದರೂ ಆಕೆಯನ್ನು ಜೀವಸಹಿತ ಮುಗಿಸಿ ಬಿಡುವ ಅನೇಕ ವಿಫಲ ಯತ್ನಗಳೂ ನಡೆದಿದ್ದವು.

`ದಿ ಸೆಟಾನಿಕ್ ವರ್ಸಸ್’ ಲೇಖಕ ಸಲ್ಮಾನ್ ರಶ್ದಿ ವಿರುದ್ಧ ಇರಾನ್‌ನ ಧಾರ್ಮಿಕ ನಾಯಕರಿಂದ ಫತ್ವಾ. ವಿಶ್ವದಲ್ಲಿ ಎಲ್ಲೇ ಇದ್ದರೂ ರಶ್ದಿಯನ್ನು ಹತ್ಯೆ ಮಾಡುವಂತೆ ಮುಸ್ಲಿಮರಿಗೆ ಆ ಫತ್ವಾದಲ್ಲಿ ಕರೆ ನೀಡಲಾಗಿತ್ತು.

ಪ್ರತಿಕ್ರಿಯೆಗಳು
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ `ಮೊಘಲ್ ಅಥವಾ ಬ್ರಿಟಿಷ್ ಆಳ್ವಿಕೆಯಲ್ಲಿ ಫತ್ವಾಗಳ ಪ್ರಾಮುಖ್ಯತೆ ಏನೇ ಇದ್ದಿರಲಿ, ಸ್ವತಂತ್ರ ಭಾರತದಲ್ಲಿ ಇದಕ್ಕೆ ಸ್ಥಾನವಿಲ್ಲ. ಅವುಗಳಿಗೆ ಸಂವಿಧಾನದ ಮಾನ್ಯತೆಯೂ ಇಲ್ಲ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮವೂ ಮುಗ್ಧರನ್ನು ಶಿಕ್ಷಿಸುವುದಿಲ್ಲ. ಧರ್ಮವೊಂದು ಸಂತ್ರಸ್ತರ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುವಂತಿಲ್ಲ’ ಎಂದು ಸಾರಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನ ಕುರಿತು ಕೆಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸದಸ್ಯ ಜಫರ್‍ಯಾಬ್ ಜಿಲಾನಿ, `ನಾವು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿ ಏನನ್ನೂ ಮಾಡುತ್ತಿಲ್ಲ. ಎರಡೂ ಕಡೆಯವರು ಸೇರಿ ಶರಿಯಾ ಕೋರ್ಟು ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನಮ್ಮ ಗುರಿ’ ಎಂದಿದ್ದರೆ, ಇನ್ನೊಬ್ಬ ಮುಸ್ಲಿಂ ಧರ್ಮಗುರು ಖಾಲಿದ್ ರಶೀದ್ ಫರಂಗಿ ಅವರು, `ಮುಸ್ಲಿಮರ ವೈಯುಕ್ತಿಕ ಕಾನೂನಿನನ್ವಯ ಕಾರ್ಯ ನಿರ್ವಹಿಸುವ ಮತ್ತು ವರ್ತಿಸುವ ಹಕ್ಕನ್ನು ಭಾರತೀಯ ಸಂವಿಧಾನವೇ ನಮಗೆ ನೀಡಿದೆ. ಸುಪ್ರೀಂಕೋರ್ಟ್‌ನ ತೀರ್ಪನ್ನು ಸರಿಯಾದ ಅಧ್ಯಯನ ನಡೆಸಿದ ಬಳಿಕವೇ ಈ ಬಗ್ಗೆ ಹೇಳಿಕೆ ನೀಡಬಹುದು’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಕುಲ್ ಹಿಂದ್ ಇಮಾಮ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಸಾಜಿದ್ ರಶೀದ್ ಅವರಂತೂ, `ಧಾರ್ಮಿಕ ವಿಚಾರವನ್ನು ನ್ಯಾಯಾಲಯದ ಮೆಟ್ಟಿಲಿಗೆ ಕೊಂಡೊಯ್ದಿz ಮೊದಲ ತಪ್ಪು. ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಆಚರಿಸುತ್ತಿದ್ದರೆ ಅದರ ಉಪದೇಶವನ್ನು ಪಾಲಿಸಲೇಬೇಕು. ಶರಿಯಾವನ್ನು ಪಾಲಿಸದವನು ನೈಜ ಮುಸಲ್ಮಾನನೇ ಅಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಫತ್ವಾವನ್ನು ಸಮರ್ಥಿಸಿಕೊಂಡಿದ್ದಾರೆ.

ಮುಸ್ಲಿಂ ಧರ್ಮಗುರುಗಳು ಹೊರಡಿಸುವ ಅಮಾನವೀಯ ಫತ್ವಾಗಳ ವಿರುದ್ಧ ಮುಸ್ಲಿಮರ ಬಹುಸಂಖ್ಯೆಯ ಒಂದು ವರ್ಗ ಮಾತ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಮೌನಕ್ಕೆ ಶರಣಾಗಿರುವುದೂ ವಾಸ್ತವ. ಇಂತಹ ಫತ್ವಾಗಳಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ ಎಂಬುದು ಆ ಮೌನದ ಅರ್ಥವೆ? ಆದರೆ ಹೀಗೆ ಮೌನವಹಿಸುವ ಬಹುಸಂಖ್ಯಾಕ ವರ್ಗ ಮನೆಯ ನಾಲ್ಕೂ ಗೋಡೆಗಳ ನಡುವೆ ಇರುತ್ತದೆ. ಫತ್ವಾ ಹೊರಡಿಸಿದ ಧಾರ್ಮಿಕ ಗುರು ಮಾತ್ರ ಇಡೀ ಸಮುದಾಯವನ್ನು ಆಳುತ್ತಿರುತ್ತಾನೆ. ಇಂತಹ ಫತ್ವಾ ಮುಸ್ಲಿಂ ಸಮಾಜದ ಬೆಳವಣಿಗೆಗೆ ಅಪಾಯಕಾರಿ ಎಂದು ಧೈರ್ಯವಾಗಿ ಹೇಳದಿದ್ದರೆ ಮುಂದಾಗಬಹುದಾದ ದುಷ್ಪರಿಣಾಮಗಳನ್ನು ತಡೆಯುವುದು ಹೇಗೆ?

ಇತ್ತೀಚೆಗೆ ವಾಷಿಂಗ್ಟನ್‌ನ ಮಧ್ಯಪೂರ್ವ ಮಾಧ್ಯಮ ಸಂಶೋಧನಾ ಸಂಸ್ಥೆಯಲ್ಲಿ ದಕ್ಷಿಣ ಏಷ್ಯಾ ಅಧ್ಯಯನ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ತುಫೈಲ್ ಅಹಮದ್ ಈ ಫತ್ವಾಗಳ ಕುರಿತು ಒಂದು ದೀರ್ಘ ಲೇಖನವನ್ನೇ ಬರೆದು, ಮುಸ್ಲಿಂ ಸಮಾಜವನ್ನು ಎಚ್ಚರಿಸಿದ್ದಾರೆ. ಆ ಲೇಖನದಲ್ಲಿ ಮುಖ್ಯವಾಗಿ ಇಸ್ಲಾಮಿಕ್ ಪುನರುಜ್ಜೀವನದ `ಮಹದಾಸೆ’ ಹೊತ್ತು ಶ್ರಮಿಸುತ್ತಿರುವ ದೇವಬಂದ್ ದಾರುಲ್ ಉಲೂಮ್ ಸಂಸ್ಥೆಯ ಅವೈಜ್ಞಾನಿಕ ಫತ್ವಾಗಳ ವಿರುದ್ಧ ಅವರು ಕಿಡಿ ಕಾರಿದ್ದಾರೆ. ದೇವಬಂದ್ ದಾರುಲ್ ಉಲೂಮ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ದೆಹಲಿ ಮೂಲದ ಪತ್ರಕರ್ತ ಅಬೀದ್ ಅನ್ವರ್ ಅವರೇ ಈ ಫತ್ವಾ ವಿರುದ್ಧ ಸಿಡಿದೆದ್ದಿದ್ದಾರೆ. `ಫತ್ವಾ ಹೊರಡಿಸುವ ಧಾರ್ಮಿಕ ಮುಂದಾಳುಗಳು ಪತ್ರಿಕೆ ಓದುವುದಿಲ್ಲ , ಟಿ.ವಿ. ನೋಡುವುದಿಲ್ಲ ಮತ್ತು ಅವರಿಗೆ ಸಮಾಜದ ವಾಸ್ತವಗಳು ಗೊತ್ತಿಲ್ಲ’ ಎಂದಿದ್ದಾರೆ. ಸಮಾಜ-ವಿಜ್ಞಾನ, ಗಣಿತ, ಭೂಗೋಳ ಮತ್ತು ನೈಸರ್ಗಿಕ ವಿಜ್ಞಾನಗಳನ್ನು ಮದರಸಾದಲ್ಲಿ ಕಲಿಸಬೇಕು. ವಿಶಾಲ ಸಮಾಜದೊಂದಿಗೆ ಮುಸ್ಲಿಂ ವಿದ್ಯಾರ್ಥಿಗಳು ವ್ಯವಹರಿಸಬೇಕಾದರೆ ಇದು ಅಗತ್ಯ. ಆದರೆ ದಾರುಲ್ ಉಲೂಮ್ ದೇವಬಂದ್ ಅಂತಹ ವೈಜ್ಞಾನಿಕ ಶಿಕ್ಷಣಕ್ಕೆ ಅವಕಾಶ ನೀಡದೇ ಇರುವುದರ ಪರಿಣಾಮವಾಗಿ ದೇವಬಂದ್‌ನ ಸೆಮಿನರಿಗಳಲ್ಲಿ ಜಿಹಾದಿಗಳು ಮತ್ತು ಆತ್ಮಹತ್ಯಾ ಬಾಂಬರ್‌ಗಳು ತಯಾರಾಗುತ್ತಿದ್ದಾರೆ ಎಂದು ತುಫೈಲ್ ಅಹಮದ್ ಖೇದ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮುಸ್ಲಿಮರು ತುಂಬಾ ಹಿಂದುಳಿದಿದ್ದಾರೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅವರ ಸಂಖ್ಯೆ ಹೆಚ್ಚಾಗಿಲ್ಲ. ಶೈಕ್ಷಣಿಕವಾಗಿಯೂ ಅವರು ಮುಂದೆ ಬಂದಿಲ್ಲ… ಇತ್ಯಾದಿ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲ ಯಾರು ಕಾರಣ ಎಂಬ ವಿಷಯದ ಬಗ್ಗೆ ಅಷ್ಟಾಗಿ ತೀವ್ರ ತರದ ಚರ್ಚೆಯೇ ನಡೆಯುವುದಿಲ್ಲ. ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಉನ್ನತ ಪರೀಕ್ಷೆಗೆ ಕುಳಿತುಕೊಳ್ಳುವ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆ. ಹಾಗಿರುವಾಗ ಉನ್ನತ ಸರ್ಕಾರೀ ಹುದ್ದೆಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುವುದಾದರೂ ಹೇಗೆ? ಆಧುನಿಕ ಶಿಕ್ಷಣ, ಪಠ್ಯಕ್ರಮಗಳಿಗೆ ಮುಸ್ಲಿಂ ಸಮಾಜ ತೆರೆದುಕೊಳ್ಳದಿದ್ದರೆ, ಭಾರತದ ರಾಷ್ಟ್ರೀಯ ಪ್ರವಾಹದೊಂದಿಗೆ ಮಿಳಿತವಾಗದಿದ್ದರೆ ಆ ಸಮಾಜದ ಅಭಿವೃದ್ಧಿ ಕನಸಿನ ಮಾತಾಗುತ್ತದೆ. ಭಾರತ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ, ಇಲ್ಲಿನ ಪರಂಪರೆ, ಇತಿಹಾಸವನ್ನು ಗೌರವಿಸುವ ಉದಾರ ಮನಸ್ಸುಗಳ ಸಂಖ್ಯೆ ಮುಸ್ಲಿಂ ಸಮಾಜದಲ್ಲಿ ಹೆಚ್ಚಾಗುವತ್ತ ಪ್ರಯತ್ನ ನಡೆಯಬೇಕು. ಅದಲ್ಲದೆ ಧಾರ್ಮಿಕ ಗುರುಗಳ ಫತ್ವಾಕ್ಕೇ ಜೋತು ಬಿದ್ದರೆ ಮುಸ್ಲಿಂ ಸಮಾಜ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನತ್ತ ಮುಖ ಮಾಡುವುದು ದುಸ್ತರವಾಗಬಹುದು. ಈ ನಿಟ್ಟಿನಲ್ಲಿ ಫತ್ವಾ ಕುರಿತ ಸುಪ್ರೀಂಕೋರ್ಟ್‌ನ ತೀರ್ಪನ್ನು ಇಡೀ ಮುಸ್ಲಿಂ ಸಮಾಜ ಮನನ ಮಾಡಬೇಕಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top