News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಧಿಕಾರಸ್ಥರು ಹುಟ್ಟುಹಾಕಿದ ಅಪಾಯಕಾರಿ ‘ಸಂಸ್ಕೃತಿ’!

vijayananda-kashappanavarಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಬಾರ್ ಒಂದರಲ್ಲಿ ಪೊಲೀಸ್ ಪೇದೆಗಳನ್ನು ನಿಂದಿಸಿ, ದಾಂಧಲೆ ನಡೆಸಿ, ಅನಂತರ ನಾಪತ್ತೆಯಾದ ಪ್ರಕರಣ ವಿಧಾನಮಂಡಲದ ಉಭಯ ಸದನಗಳ ಕಾರ್ಯಕಲಾಪವನ್ನು ಬಲಿ ತೆಗೆದುಕೊಂಡಿದೆ. ಶಾಸಕರನ್ನು ತಕ್ಷಣ ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದರೆ, ಕಾಶಪ್ಪನವರ್ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ, ಅದೂ ಅಲ್ಲದೆ ಇದೇನೂ ಅಂತಹ ದೊಡ್ಡ ಪ್ರಕರಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಪ್ಪೆ ಸಾರಿಸಿರುವುದು ಇನ್ನಷ್ಟು ವಿವಾದಗಳಿಗೆ ಎಡೆಗೊಟ್ಟಿದೆ. ಕಾಂಗ್ರೆಸ್‌ನ ಹಿರಿಯ ಶಾಸಕ ರಮೇಶ್ ಕುಮಾರ್ ಅವರಂತೂ ‘ಇವೆಲ್ಲ ಮಾಮೂಲಿ. ನಾವೆಲ್ಲರೂ ಇಂತಹ ತಪ್ಪುಗಳನ್ನು ಮಾಡಿಯೇ ಇರುತ್ತೇವೆ. ಆದರೆ ಸಿಕ್ಕಿಹಾಕಿಕೊಂಡಿಲ್ಲ. ಕಾಶಪ್ಪನವರ್ ಅವಿವೇಕಿ. ಅದಕ್ಕೇ ಆಪತ್ತು ತಂದುಕೊಂಡಿದ್ದಾರೆ’ ಎಂದು ಹೇಳುವ ಮೂಲಕ ಶಾಸಕರಾರೂ ತಪ್ಪು ಮಾಡದ ಉತ್ತಮರಲ್ಲ. ಎಲ್ಲರ ಮನೆಯ ದೋಸೆಯೂ ತೂತು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಒಟ್ಟಾರೆ ಕಾಶಪ್ಪನವರ್ ರಕ್ಷಣೆಗೆ ಸ್ವತಃ ಮುಖ್ಯಮಂತ್ರಿಗಳೇ ನಿಂತಿದ್ದಾರೇನೋ ಎಂಬ ಸನ್ನಿವೇಶ ನಿಮಾರ್ಣವಾಗಿದೆ. ಆ ಶಾಸಕರನ್ನು ಬಂಧಿಸುವಲ್ಲಿ ಪೊಲೀಸರ ಪ್ರಯತ್ನವೂ ವಿಫಲವಾಗಿದೆ. ಈ ನಡುವೆ ಹುನಗುಂದ ಶಾಸಕ ಬಂಧನದ ಭೀತಿಯಿಂದ ಪಾರಾಗಲು ನೀರಿಕ್ಷಣಾ ಜಾಮೀನಿಗೆ ಯತ್ನಿಸಿದ್ದು, ಈ ದಿನ ಅದು ಅಕಸ್ಮಾತ್ ದೊರೆತಲ್ಲಿ ಸದನದಲ್ಲಿ ಎರಡು ದಿನಗಳ ಕಾಲ ನಡೆದ ಗಲಾಟೆಗೆ ಯಾವ ಅರ್ಥವೂ ಉಳಿಯದು. ಬಿಜೆಪಿ ಶಾಸಕರು ಗಲಾಟೆ ಮಾಡಿದ್ದೇ ಬಂತು ಎನ್ನುವಂತಾಗಬಹುದು.

ಹುನಗುಂದದ ಶಾಸಕ ತಡರಾತ್ರಿಯವರೆಗೆ ಐಶಾರಾಮಿ ಹೊಟೇಲ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿ ಆಚರಿಸಿದ್ದು, ನಿಯಮ ಮೀರಿ ವರ್ತಿಸಿದ್ದು, ವಿಚಾರಿಸಲು ಬಂದ ಪೇದೆಗಳಿಗೆ ತದುಕಿದ್ದು, ಹೊಟೇಲ್‌ನ ಒಂದು ಲಕ್ಷ ಮೊತ್ತದ ಬಿಲ್ ಪಾವತಿಸದೆ ಈಗ ನಾಪತ್ತೆಯಾಗಿದ್ದು – ಇವೆಲ್ಲ ಆತನ ಕ್ಷೇತ್ರದ ಜನರಿಗೆ ಆಶ್ಚರ್ಯ ತರುತ್ತಿಲ್ಲ ಎಂಬ ಸಂಗತಿಯಂತೂ ಇನ್ನಷ್ಟು ಆಶ್ಚರ್ಯಕರ! ಈಗಾಗಲೇ ಕಾಶಪ್ಪನವರ್ ವಿರುದ್ಧ ನಾಲ್ಕೈದು ಕ್ರಿಮಿನಲ್ ಕೇಸುಗಳಿವೆಯಂತೆ. ಗೆಲ್ಲುವ ಅಭ್ಯರ್ಥಿ ಬೇಕೆಂದು ಕಾಂಗ್ರೆಸ್ ಅವರಿಗೇ ಟಿಕೆಟ್ ಕೊಟ್ಟಿರಬಹುದು. ಡೋರ್ ಟು ಡೋರ್ ಕ್ಯಾಂಪೈನ್ ನಡೆಸಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲಿಸಿದ್ದರೆ, ಅವರೀಗ ಬಾರ್ ಟು ಬಾರ್ ಅಲೆಯುತ್ತ ಶಾಸಕ ಸ್ಥಾನದ ಘನತೆ ಗೌರವಗಳನ್ನು ಹರಾಜಿಗಿಟ್ಟಿದ್ದಾರೆ. ಬಾರ್‌ನಲ್ಲಿ ಕುಡಿದು ಅವರು ಬೆಂಬಲಿಗರೊಡನೆ ಗಲಾಟೆ ಮಾಡಿದ್ದರೆ, ಇತ್ತ ವಿಧಾನಮಂಡಲದಲ್ಲಿ ಈ ಪ್ರಕರಣದ ಕುರಿತು ಕುಡಿಯದೇ ಸದಸ್ಯರು ಭಾರಿ ಗಲಾಟೆ ನಡೆಸಿದ್ದಾರೆ. ಪರಿಣಾಮ ಮಾತ್ರ ಶೂನ್ಯ. ಪ್ರಜ್ಞಾವಂತರಂತೂ ಕುಡಿದು ಗಲಾಟೆ ನಡೆಸಿದ ಶಾಸಕ ಹಾಗೂ ಕುಡಿಯದೇ ವಿಧಾನಸಭೆಯಲ್ಲಿ ಗಲಾಟೆ ನಡೆಸಿದ ಶಾಸಕರ ಬಗ್ಗೆ ಅಸಹ್ಯಪಟ್ಟುಕೊಂಡಿದ್ದಾರೆ. ಈ ಸೌಭಾಗ್ಯಕ್ಕೆ ಇವರನ್ನೆಲ್ಲಾ ನಾವು ವಿಧಾನಸಭೆಗೆ ಆರಿಸಿ ಕಳುಹಿಸಬೇಕಿತ್ತಾ ? ಎಂದು ಹಣೆ ಹಣೆ ಚಚ್ಚಿಕೊಂಡಿದ್ದಾರೆ.

ಈ ಪ್ರಕರಣ ಇಂದು ಅಥವಾ ನಾಳೆ ಮುಕ್ತಾಯಗೊಳ್ಳಬಹುದು. ಕಾಶಪ್ಪನವರ್ ಬಂಧನ ಆಗಬಹುದು ಅಥವಾ ಅಗದೆಯೂ ಇರಬಹುದು. ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯವಂತೂ ಖಂಡಿತ ಇರುವುದಿಲ್ಲ. ಏಕೆಂದರೆ ಕಾಶಪ್ಪನವರ್ ಹೇಳಿಕೇಳಿ ಒಬ್ಬ ರಾಜಕಾರಣಿ. ಆತನನ್ನು ರಕ್ಷಿಸಬೇಕಾದ ಅನಿವಾರ್ಯತೆ ಆಡಳಿತಾರೂಢ ಕಾಂಗ್ರೆಸ್‌ಗೆ ಇದ್ದೇ ಇರುತ್ತದೆ. ಆದರೆ ಈ ಪ್ರಕರಣ ರವಾನಿಸುವ ಗಂಭೀರ ಸಂದೇಶದ ಬಗ್ಗೆ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಅಥವಾ ಉಳಿದ ರಾಜಕಾರಣಿಗಳಾಗಲಿ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಮಾತ್ರ ಅಪ್ಪಟ ನಿಜ.

ರಾಜಕಾರಣಿಗಳಿಗೆ ಸಂಬಂಧಿಸಿದ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ತಪಸ್‌ಪಾಲ್ ಇತ್ತೀಚೆಗೆ ‘ಸಿಪಿಎಂ ಮುಖಂಡರ ಮನೆಗಳಿಗೆ ತೆರಳಿ ಅವರ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ’ ಎಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದರು. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ಮಹಿಳೆಯಾಗಿದ್ದರೂ ತನ್ನ ಪಕ್ಷದ ಅವಿವೇಕಿ ಶಾಸಕನ ಇಂತಹ ಹೇಳಿಕೆಯನ್ನು ಖಂಡಿಸುವ ಗೋಜಿಗೆ ಹೋಗದೆ ಮೌನವಾಗಿದ್ದುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೂ ಸಿಪಿಎಂ ಕಾರ್ಯಕರ್ತರ ಆಕ್ರೋಶ ಕಾವೇರಿದ ಬಳಿಕ ತಪಸ್‌ಪಾಲ್ ತನ್ನ ಆ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು. ಆಗಲೂ ಮುಖ್ಯಮಂತ್ರಿ ಮಮತಾ ಅಸಹಾಯಕರಂತೆ ವರ್ತಿಸಿದ್ದರು.ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾಶಪ್ಪನವರ್ ಪ್ರಕರಣ ದೊಡ್ಡದೇನಲ್ಲ ಎಂದು ಏನೂ ಆಗದವರಂತೆ ಹೇಳಿರುವುದು ಮುಖ್ಯಮಂತ್ರಿಗಳ ಹೊಣೆಗಾರಿಕೆ, ನೈತಿಕತೆಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ‘ನಿಮ್ಮ ಸರ್ಕಾರ ಇದ್ದಾಗ ಮಂತ್ರಿ ಹಾಲಪ್ಪ ಗೆಳೆಯನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಲಿಲ್ಲವೇ ? ಲಕ್ಷ್ಮಣ ಸವದಿ ಸದನದಲ್ಲಿ ನೀಲಿ ಚಿತ್ರ ನೋಡಲಿಲ್ಲವೇ ?’ ಮುಂತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುಟಿಮೀರಿ ಮಾತನಾಡಿರುವುದು ಅವರ ಯೋಗ್ಯತೆಗೆ ಖಂಡಿತ ಶೋಭಿಸುವಂತಹದಲ್ಲ. ಬಿಜೆಪಿಯ ಶಾಸಕರು ತಪ್ಪು ಮಾಡಿದರೆ ಅದು ಕಾಂಗ್ರೆಸ್ ಶಾಸಕರಿಗೆ ಅಂತಹದೇ ತಪ್ಪೆಸಗಲು ಲೈಸೆನ್ಸ್ ನೀಡಿದಂತೆ ಎಂಬುದು ಸಿದ್ದರಾಮಯ್ಯನವರ ಈ ಹೇಳಿಕೆಯ ಒಳಾರ್ಥವೆ? ಬಿಜೆಪಿ ಎಸಗಿರಬಹುದಾದ ತಪ್ಪುಗಳನ್ನು ತಮ್ಮ ಪಕ್ಷದ ಶಾಸಕರು ಎಸಗದಂತೆ ಹದ್ದುಗಣ್ಣಿನ ಎಚ್ಚರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಬೇಕಿತ್ತಲ್ಲವೇ? ಕಾಂಗ್ರೆಸ್ ಶಾಸಕರು ತಪ್ಪು ಮಾಡಿದಾಗ ನಿರ್ದಯವಾಗಿ ಖಂಡಿಸಿ, ಅಂಥವರ ವಿರುದ್ಧ ತಕ್ಷಣ ಕ್ರಮಕ್ಕೆ ಅವರು ಮುಂದಾಗಬೇಕಿತ್ತಲ್ಲವೇ? ಮುಖ್ಯಮಂತ್ರಿಯೆಂದರೆ ಕಾನೂನು ಕಾಯ್ದೆಗಳ ದಂಡಧಾರಿಗಳು. ದಂಡಧಾರಿಗಳು ಯಾವತ್ತೂ ಸಂಯಮದಿಂದಿರಬೇಕು. ದಂಡವಿರುವುದೇ ತಪ್ಪಿತಸ್ಥರನ್ನು ದಂಡಿಸುವುದಕ್ಕಾಗಿ. ಆದರೆ ತಪ್ಪಿತಸ್ಥನೆಂದು ಅನುಮಾನ ವ್ಯಕ್ತವಾದಾಗಲೂ ದಂಡವನ್ನು ಎತ್ತದ ದಂಡಧಾರಿಗೆ ಏನೆನ್ನಬೇಕು ?

ಸುನಂದಾ ತರೂರ್ ಪ್ರಕರಣ

ಕೇಂದ್ರದ ಮಾಜಿ ಸಚಿವ ಶಶಿತರೂರ್ ಅವರ ಮೂರನೆಯ ಅಧಿಕೃತ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಿದೆ. ಸುನಂದಾ ಶವ ಪರೀಕ್ಷೆ ವರದಿಯನ್ನು ತಿರುಚಲು ತಮ್ಮ ಮೇಲೆ ರಾಜಕೀಯ ಒತ್ತಡವಿತ್ತು ಎಂದು ಹೊಸದಿಲ್ಲಿಯ ಏಮ್ಸ್ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ಅವರ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಕಂಪನ ಎಬ್ಬಿಸಿದೆ. ಸುನಂದಾ ಅವರದು ಸಹಜ ಸಾವು ಎಂದು ದಾಖಲಿಸುವಂತೆ ಡಾ. ಸುಧೀರ್ ಗುಪ್ತಾ ಅವರ ಮೇಲೆ ಶಶಿತರೂರ್ ಮತ್ತು ಗುಲಾಂ ನಬಿ ಅಜಾದ್ ಒತ್ತಡ ಹೇರಿದ್ದರಂತೆ. ತಮ್ಮ ಹೇಳಿಕೆ ನಿಜವೆಂದು ಸಾಬೀತುಪಡಿಸಲು ಡಾ. ಗುಪ್ತಾ, ತರೂರ್ ಕಳುಹಿಸಿದ್ದ ಈಮೇಲ್‌ಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ್ದಾರೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ ಎಂಬುದು ಬಿಜೆಪಿ ನಾಯಕ ಡಾ. ಸುಬ್ರಹ್ಮಣ್ಯ ಸ್ವಾಮಿ ಅವರ ವಾದ. ಐಪಿಎಲ್‌ನಲ್ಲಿ ಆಕ್ರಮ ಹಣದ ವ್ಯವಹರಕ್ಕೆ ಸಂಬಂಧಿಸಿದಂತೆ ಸುನಂದಾ ಕೊಲೆ ನಡೆದಿದೆ ಎಂದು ಡಾ. ಸ್ವಾಮಿ ಹೇಳುತ್ತಾರೆ. ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಸಂಬಂಧಿಸಿದ ವಿವರ ಬಹಿರಂಗಪಡಿಸುವುದಕ್ಕಾಗಿ ಸುನಂದಾ ಸುದ್ದಿಗೋಷ್ಠಿ ಕರೆಯಲು ಬಯಸಿದ್ದರು. ಈ ಸುದ್ದಿಗೋಷ್ಠಿ ನಡೆದಿದ್ದರೆ ಐಪಿಎಲ್ ಆಕ್ರಮ ಹಣದ ವ್ಯವಹಾರದಲ್ಲಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಶಾಮೀಲಾಗಿರುವುದು ಬಯಲಾಗುತ್ತಿತ್ತು. ಇದರಿಂದ ತೊಂದರೆಗೊಳಗಾಗಲಿದ್ದ ಉನ್ನತ ಮತ್ತು ಪ್ರಭಾವೀ ವ್ಯಕ್ತಿಗಳು ಸುನಂದಾ ಅವರನ್ನು ಆ ಸುದ್ದಿಗೋಷ್ಠಿ ನಡೆಯುವ ಮುನ್ನವೇ ಮುಗಿಸಿದ್ದಾರೆಂಬುದು ಡಾ. ಸ್ವಾಮಿ ಅವರ ಆರೋಪ. ಯಾರು, ಏಕೆ ಕೊಲೆ ಮಾಡಿದರು ಎಂಬುದು ತರೂರ್‌ಗೆ ತಿಳಿದಿದೆ ಎಂದು ಸ್ವಾಮಿ ಹೇಳುತ್ತಾರೆ. ಏಮ್ಸ್ ವಿಧಿವಿಜ್ಞಾನ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಯ ವೈದ್ಯರೂ ಕೂಡ ಒತ್ತಡಕ್ಕೆ ಒಳಗಾಗಿ ಸುಳ್ಳು ವರದಿ ನೀಡಬೇಕಾಗುತ್ತದೆ ಎಂಬ ಸಂಗತಿಯಂತೂ ಇನ್ನಷ್ಟು ಭಯಾನಕ ! ಭ್ರಷ್ಟ, ಕಪಟ ರಾಜಕಾರಣಿಗಳು ಅದೆಷ್ಟು ಬಲಶಾಲಿಗಳಾಗಿರಬೇಕು !

ರಾಜಕಾರಣಿಗಳಷ್ಟೇ ಅಲ್ಲ, ಅಧಿಕಾರದ ದಂಡ ಹಿಡಿದಿರುವ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರ ಮೇಲೆ ಆಗಾಗ ನಡೆಸುವ ದೌರ್ಜನ್ಯಗಳು ಯಾರಿಗೆ ತಾನೆ ತಿಳಿದಿಲ್ಲ ? ಯಾವುದೋ ಕಾರಣಕ್ಕೆ ಬಂಧಿತರಾದ ಆರೋಪಿಗಳು ನ್ಯಾಯಾಲಯಕ್ಕೆ ತಲುಪುವ ಮುನ್ನವೇ ಲಾಕಪ್‌ನಲ್ಲೇ ಸಾವಿಗೀಡಾಗುವ ಅದೆಷ್ಟೋ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಆರೋಪಿಗಳ ಆ ನಿಗೂಢ ಸಾವಿಗೆ ಯಾರು ಹೊಣೆ ? ಅವರನ್ನು ಹೀಗೆ ನಿಗೂಢವಾಗಿ ಸಾಯಿಸಲು ಪೊಲೀಸರಿಗೆ ಅಧಿಕಾರ ಕೊಟ್ಟವರಾರು ? ಸಾಯಿಸಿಬಿಡಿ ಎಂದು ತಾಕೀತು ಮಾಡಿದವರಾರು ? ಬಂಧನಕ್ಕೊಳಗಾದ ಮಹಿಳೆಯರ ಮೇಲೆ ಠಾಣೆಯಲ್ಲೇ ನಡೆಯುವ ಅತ್ಯಾಚಾರಗಳು ರವಾನಿಸುವ ಸಂದೇಶವಾದರೂ ಏನು ? ಇಂತಹ ಪ್ರಕರಣಗಳಲ್ಲಿ ಅದೆಷ್ಟು ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆಯಾಗಿದೆ ? ಇದಕ್ಕೆ ಉತ್ತರ ಹೇಳುವವರಾರು ?

ಕರ್ನಾಟಕದ ಒಬ್ಬ ಪ್ರಖ್ಯಾತ ಜಿಲ್ಲಾಧಿಕಾರಿಯಾಗಿದ್ದ ಬಿಸ್ವಾಸ್ ಎಂಬವರು ಯಾವುದೋ ಕಾರಣಕ್ಕೆ ಪ್ರಕರಣ ಒಂದರಲ್ಲಿ ಪೊಲೀಸರ ಕೈಯಿಂದ ಲಾಠಿ ಕಸಿದುಕೊಂಡು ಬಡಪಾಯಿ ರೈತನೊಬ್ಬನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದರು. ಈ ದೃಶ್ಯ ಖಾಸಗಿ ವಾಹಿನಿಗಳಲ್ಲಿ ಪದೇ ಪದೇ ಪ್ರಸಾರವಾಗುತ್ತಲೇ ಇತ್ತು. ಮಾನವೀಯತೆ, ಪ್ರಜ್ಞಾವಂತಿಕೆ ಎನ್ನುವುದು ಸರ್ಕಾರಕ್ಕೆ ಒಂದಿಷ್ಟಾದರೂ ಇದ್ದಿದ್ದರೆ ಆ ಜಿಲ್ಲಾಧಿಕಾರಿ ಮರುದಿನದಿಂದ ಅಲ್ಲಿರಲು ಸಾಧ್ಯವಿರಲಿಲ್ಲ. ಆದರೆ ಆ ಜಿಲ್ಲಾಧಿಕಾರಿ ಅದೇ ಜಿಲ್ಲೆಯಲ್ಲೇ ಇದ್ದರು. ಅವರಿಗೆ ಏನೂ ಆಗಲಿಲ್ಲ. ಆ ರೈತ ತಪ್ಪು ಮಾಡಿರಬಹುದು. ಆದರೆ ಆತನಿಗೆ ಲಾಠಿಯಿಂದ ಹಿಗ್ಗಾಮುಗ್ಗಾ ಬಡಿಯುವ ಅಧಿಕಾರವನ್ನು ಆ ಜಿಲ್ಲಾಧಿಕಾರಿಗೆ ಕೊಟ್ಟವರು ಯಾರು ? ಜಿಲ್ಲಾಧಿಕಾರಿಯ ಈ ವಿಪರೀತ ವರ್ತನೆಯ ಬಗ್ಗೆ ಯಾವ ರಾಜಕಾರಣಿಗಳೂ ಕಮಕ್‌ಕಿಮಕ್ ಎನ್ನಲಿಲ್ಲ. ಅನ್ಯಾಯವಾಗಿ ಹೊಡೆತ ತಿಂದ ಆ ಬಡಪಾಯಿ ರೈತನ ನೆರವಿಗೆ ಕೊನೆಗೆ ರೈತ ಸಂಘವೂ ಧಾವಿಸಿ ಬರಲಿಲ್ಲ.

ಹೀಗೆ ಅದೆಷ್ಟೋ ನಿದರ್ಶನಗಳನ್ನು ಕೊಡಬಹುದು. ಅಧಿಕಾರ ಸೂತ್ರ ಹಿಡಿದಿರುವ ರಾಜಕಾರಣಿಗಳು, ಪೊಲೀಸರು, ಅಧಿಕಾರಿಗಳು ಅಧಿಕಾರವಿದೆಯೆಂದ ಮಾತ್ರಕ್ಕೆ ಹೇಗೆ ಬೇಕಾದರೂ ಕಾಯ್ದೆ ಉಲ್ಲಂಘಿಸಿ ನಡೆದುಕೊಳ್ಳಬಹುದೆನ್ನುವ ಅಸಡ್ಡಾಳ ಮನೋಭಾವವೇ ಈ ಪಿಡುಗಿಗೆ ಕಾರಣ. ಅಧಿಕಾರ ಸೂತ್ರ ಹಿಡಿಯುವ ಮುನ್ನ, ಸಂವಿಧಾನದ ಆಶಯಗಳಿಗೆ ಬದ್ಧನಾಗಿರುತ್ತೇನೆ ಎಂದು ಶಪಥ ಸ್ವೀಕರಿಸಿದವರೇ ಅನಂತರ ಅದನ್ನು ಗಾಳಿಗೆ ತೂರುತ್ತಾರೆ. ಯಾರಿಗೆ ಬೇಕಾದರೂ ತಾನು ಹೊಡೆಯಬಹುದು, ಯಾರ ಮೇಲೆ ಬೇಕಾದರೂ ದೌರ್ಜನ್ಯ, ಅತ್ಯಾಚಾರ ಎಸಗಬಹುದು, ತನ್ನನ್ನು ಯಾರೂ ಕೇಳುವಂತಿಲ್ಲ ಎಂಬ ಅಧಿಕಾರದ ಮದ ತುಂಬಿಕೊಳ್ಳುತ್ತದೆ. ಕಾನೂನು ಕಾಯ್ದೆ ಇಂಥವರ ಮುಂದೆ ಸೋಲುತ್ತವೆ. ಜನರಿಗೊಂದು ಕಾನೂನು. ಆದರೆ ಇವರಿಗೆ ಬೇರೆಯದೇ ಕಾನೂನು! ಒಟ್ಟಾರೆ ಈ ಅಧಿಕಾರಸ್ಥರು ಹೊಸದೊಂದು ‘ಸಂಸ್ಕೃತಿ’ಯನ್ನೇ ಹುಟ್ಟುಹಾಕುತ್ತಿದ್ದಾರೆ. ಅದು ಮಾತ್ರ ಅಪಾಯಕಾರಿ ಸಂಸ್ಕೃತಿ !

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top