News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಸ್ಲಿಂ ತುಷ್ಟೀಕರಣಕ್ಕೆ ಸೋಲಾಯಿತೇಕೆ?

Prayingಭಾರತ ದೇಶದ ಮುಸ್ಲಿಮರು ಇರಾಕ್‌ನಲ್ಲಿ ನಡೆದಿರುವ ಶಿಯಾ – ಸುನ್ನಿ ಸಂಘರ್ಷದ ಕುರಿತು ಬಿಸಿಬಿಸಿ ಚರ್ಚೆ ಖಂಡಿತ ಮಾಡುತ್ತಿಲ್ಲ. ಅದು ಅವರಿಗೆ ಸಂಬಂಧಿಸಿದ ವಿಷಯವೇ ಅಲ್ಲವೇನೋ ಎಂಬಂತೆ ಮೌನ ತಳೆದಿದ್ದಾರೆ. ಆದರೆ ಅವರ ತಲೆ ತಿನ್ನುತ್ತಿರುವ ವಿಷಯ ಬೇರೆಯೇ ಇದೆ. ಅದೆಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಅತೀ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರು ಆಯ್ಕೆಯಾಗಿದ್ದು ಏಕೆ ಎಂಬುದು. ಇಂತಹದೊಂದು ಸಂದಿಗ್ಧ ಸ್ಥಿತಿ ಹಿಂದೆಂದೂ ಒದಗಿ ಬಂದಿರಲಿಲ್ಲ. ಈ ಸ್ಥಿತಿಯಿಂದ ಮೇಲೆ ಬರುವುದು ಹೇಗೆ ಎಂಬುದು ಅವರ ಸದ್ಯದ ಚಿಂತೆ. ಅವರಂತೆಯೇ ಈ ವಿಷಯದ ಕುರಿತು ಚಿಂತೆಗೀಡಾಗಿರುವವರೆಂದರೆ ಎಡಪಂಥೀಯ ವಿಚಾರವಾದಿಗಳು! ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿ ಸಂಸತ್ತಿಗೆ ಆಯ್ಕೆಯಾದರೆ `ಜಾತ್ಯಾತೀತತೆ’ಯ ಅಸ್ತಿತ್ವಕ್ಕೇ ಸಂಚಕಾರ ಬರಬಹುದು ಎಂಬ ಭೀತಿ ಈ ಮಂದಿಗೆ!

ಈ ಬಾರಿ ಲೋಕಸಭೆಗೆ ಆಯ್ಕೆಯಾದ ಮುಸ್ಲಿಂ ಸದಸ್ಯರು ಕೇವಲ 23. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಗೆ ಹೋಲಿಸಿದರೆ ಇದು ಕೇವಲ ಶೇ. 4.4 ರಷ್ಟು ಆಗುತ್ತದೆ. ಇಂತಹ ಸ್ಥಿತಿ 1957 ರಲ್ಲಿ ಒಮ್ಮೆ ಒದಗಿ ಬಂದಿತ್ತು. ಆಗಲೂ ಒಟ್ಟು 23 ಮಂದಿ ಮುಸ್ಲಿಮರು ಲೋಕಸಭೆಗೆ ಆಯ್ಕೆಯಾಗಿದ್ದರು. ಲೋಕಸಭೆಗೆ ಅತೀ ಹೆಚ್ಚು ಮುಸ್ಲಿಂ ಸದಸ್ಯರು ಆಯ್ಕೆಯಾಗಿದ್ದು 1980 ರಲ್ಲಿ. ಆಗ ಅವರ ಸಂಖ್ಯೆ 49 ಆಗಿತ್ತು.

1951-52 ರ ಲೋಕಸಭಾ ಚುನಾವಣೆಯಿಂದ ಹಿಡಿದು 1971 ರ ಚುನಾವಣೆ ವರೆಗೆ ಲೋಕಸಭೆಯಲ್ಲಿದ್ದ ಮುಸ್ಲಿಂ ಸದಸ್ಯರ ಸಂಖ್ಯೆ 20 ರ ಆಜುಬಾಜಿನಲ್ಲಿ. 1977 ರಲ್ಲಿ ಮುಸ್ಲಿಂ ಲೋಕಸಭಾ ಸದಸ್ಯರ ಸಂಖ್ಯೆ 32 ಕ್ಕೇರಿತ್ತು. 1981 ರಲ್ಲಿ 49 ರ ಗರಿಷ್ಠ ಸಂಖ್ಯೆಗೆ ತಲುಪಿತು. 1984-85 ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ 404 ಸ್ಥಾನ ಗಳಿಸಿದಾಗ ಆಗಲೂ ಮುಸ್ಲಿಂ ಎಂಪಿಗಳ ಸಂಖ್ಯೆ 45 ಕ್ಕೆ ಇಳಿದಿತ್ತು. ಅದಾದ ಮೇಲೆ 1989 ರಲ್ಲಿ 33, 1991ರಲ್ಲಿ 29 ಹಾಗೂ 1996ರಲ್ಲಿ 27 ಕ್ಕೆ ಇಳಿದಿತ್ತು. 1998 ರಲ್ಲಿ 38, 1999 ರಲ್ಲಿ 32, 2004 ರಲ್ಲಿ 35 ಹಾಗೂ 2009 ರಲ್ಲಿ 28 ಮುಸ್ಲಿಂ ಸದಸ್ಯರು ಲೋಕಸಭೆಯಲ್ಲಿ ಇದ್ದರು.

ಇದೆಲ್ಲಾ ಅಂಕಿ ಸಂಖ್ಯೆಗಳು ಹೇಗೇ ಇರಲಿ,ಮುಸ್ಲಿಮ್ ಸಮುದಾಯವನ್ನು ಈ ಬಾರಿ ಅಚ್ಚರಿಯಲ್ಲಿ ಕೆಡವಿದ ವಿದ್ಯಮಾನವೆಂದರೆ ಉತ್ತರ ಪ್ರದೇಶದಂತಹ ಶೇ. 40ರ ಮುಸ್ಲಿಂ ಬಾಹುಳ್ಯ ರಾಜ್ಯದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಅಭ್ಯರ್ಥಿ ಯಾವುದೇ ಪಕ್ಷದಿಂದ ಆಯ್ಕೆಯಾಗದಿರುವುದು. ಇಂತಹದೊಂದು ಪ್ರಸಂಗ ನಡೆದಿರುವುದು ಇದೇ ಮೊದಲ ಬಾರಿ. ಉತ್ತರ ಪ್ರದೇಶದಿಂದ ಪ್ರತೀ ಬಾರಿ ಆಯ್ಕೆಯಾಗುವ ಮುಸ್ಲಿಂ ಸದಸ್ಯರ ಸಂಖ್ಯೆಯಲ್ಲಿ ಏರುಪೇರು ಆಗುತ್ತಲೇ ಇರುತ್ತದೆ. 1980 ರಲ್ಲಿ 18 ಮಂದಿ ಆ ರಾಜ್ಯದಿಂದ ಆಯ್ಕೆಯಾಗಿದ್ದರೆ, 1962 ರಲ್ಲಿ ಆಯ್ಕೆಯಾಗಿದ್ದು ಕೇವಲ 5 ಮಾತ್ರ. 2009 ರಲ್ಲಿ ಸಲ್ಮಾನ್ ಖುರ್ಷಿದ್, ಮಹಮ್ಮದ್ ಅಜರುದ್ದೀನ್, ಜಾಫರ್ ಆಲಿ ನಖ್ವಿ (ಕಾಂಗ್ರೆಸ್), ಕದೀರ್ ರಾಣಾ, ಶಫೀಕುರ್ ರೆಹಮಾನ್ ಬರ್ಖ್, ಕೈಸರ್ ಜಹಾಂ ಮತ್ತು ತಬಸ್ಸಂ ಹಸನ್ (ಬಿಎಸ್ಪಿ) ಈ ರಾಜ್ಯದಿಂದ ಆಯ್ಕೆಯಾಗಿದ್ದರು.

ಈ ಬಾರಿ ಉತ್ತರ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಿದ ಮುಸ್ಲಿಮರ ಸಂಖ್ಯೆ 55. ಬಿಎಸ್ಪಿಯಿಂದ 19, ಸಮಾಜವಾದಿ ಪಕ್ಷದಿಂದ 13, ಕಾಂಗ್ರೆಸ್‌ನಿಂದ 11 ಮತ್ತು ಆಮ್‌ಆದ್ಮಿ ಪಕ್ಷದಿಂದ 12. ಆಶ್ಚರ್ಯವೆಂದರೆ ಈ ಪೈಕಿ ಯಾರೊಬ್ಬರೂ ಮತ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೂ ಬರಲಿಲ್ಲ. ಬಹುತೇಕ ಅಭ್ಯರ್ಥಿಗಳು ಠೇವಣಿಯನ್ನೇ ಕಳೆದುಕೊಂಡರು. ಭಾರತೀಯ ಜನತಾ ಪಕ್ಷ ಉ.ಪ್ರ.ದಿಂದ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆದರೆ ಅಜಂಗಢ, ಬದೌನ್‌ನಂತಹ 21 ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿತು. ಈ ಎಲ್ಲಾ ಕ್ಷೇತ್ರಗಳಲ್ಲೂ ಸಮಾಜವಾದಿ ಪಕ್ಷವು ಪ್ರಬಲ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು. ಆದರೂ ಒಂದೇ ಒಂದು ಸ್ಥಾನ ಗೆಲ್ಲಲಾಗಲಿಲ್ಲ.

ಯಾಕೆ ಹೀಗೆ? ಮುಸ್ಲಿಮರು ಯಾಕೆ ಗೆಲ್ಲಲಿಲ್ಲ? ಚುನಾವಣಾ ಫಲಿತಾಂಶದ ಬಳಿಕ ಇಂತಹ ಪ್ರಶ್ನೆಗಳು ಸಾಕಷ್ಟು ಚರ್ಚೆಗೀಡಾಗಿವೆ. ಆದರೆ ಸತ್ಯಾಂಶವನ್ನು ಮನವರಿಕೆ ಮಾಡಿಕೊಳ್ಳಲು ಬಿಜೆಪಿ ಹೊರತುಪಡಿಸಿ ಬೇರೆ ಯಾವ ಪಕ್ಷವೂ ಮನಸ್ಸು ಮಾಡಲಿಲ್ಲ. ಜಾತ್ಯಾತೀತ ಹಣೆಪಟ್ಟಿ ಅಂಟಿಸಿಕೊಂಡ ಪಕ್ಷಗಳು ಇದುವರೆಗೆ ಮುಸ್ಲಿಮರನ್ನು ತಮ್ಮ ಓಟ್‌ಬ್ಯಾಂಕ್ ಎಂದೇ ಭಾವಿಸಿದ್ದವು.ಮುಸ್ಲಿಮರನ್ನು ರಾಷ್ಟ್ರೀಯ ಪ್ರವಾಹದಲ್ಲಿ ಒಗ್ಗೂಡಿಸಲು ಯಾವುದೇ ಇತ್ಯಾತ್ಮಕ ಯೋಜನೆಗಳನ್ನು ಈ ಪಕ್ಷಗಳು ಹಾಕಿಕೊಂಡಿರಲಿಲ್ಲ. ಇಂತಹ ಸೋ ಕಾಲ್ಡ್ ಸೆಕ್ಯುಲರ್ ಪಕ್ಷಗಳಿಗೆ ಇದ್ದಿದ್ದು ಒಂದೇ ಅಜೆಂಡಾ – `ಮೋದಿಯನ್ನು ಸೋಲಿಸಿ, ಬಿಜೆಪಿಯನ್ನು ನಿರ್ನಾಮ ಮಾಡಿ’. ಬಿಜೆಪಿ ಗೆದ್ದರೆ ಮುಸ್ಲಿಮರ ಸರ್ವನಾಶವಾಗುತ್ತದೆಂದು ಈ ಪಕ್ಷಗಳು ಮುಸ್ಲಿಂ ಸಮುದಾಯದಲ್ಲಿ ಭಯದ ಬೀಜವನ್ನು ಬಿತ್ತಿದವು. ಹೀಗಾಗಿ ಪ್ರತೀ ಬಾರಿ ಇಡಿಯಾಗಿ ಸಿಗುತ್ತಿದ್ದ ಮುಸ್ಲಿಂ ಮತಗಳು ಈ ಬಾರಿ ಸಿಡಿದು ಹೋಗಿ ಬೇರೆ ಬೇರೆ ಪಕ್ಷಗಳ ಪಾಲಾಯಿತು. ಇನ್ನೊಂದೆಡೆ ಬಿಜೆಪಿ ಇದುವರೆಗೆ ಚುನಾವಣೆಯಲ್ಲಿ ತಳುಕು ಹಾಕಿಕೊಂಡಿದ್ದ ಜಾತಿ, ಧರ್ಮ, ಮತ , ಪಂಥಗಳ ಗೋಡೆಯನ್ನು ಒಡೆದು ಅಭಿವೃದ್ಧಿ ಮಂತ್ರಕ್ಕೆ ಹೆಚ್ಚು ಒತ್ತು ನೀಡಿತು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತನಾಡಿದ ನೂರಾರು ರ್‍ಯಾಲಿಗಳಲ್ಲಿ `ಹಿಂದುತ್ವ’ ಎಂಬ ಪದವನ್ನು ಉಚ್ಚರಿಸಿದ್ದು ಒಮ್ಮೆ ಮಾತ್ರ. ಆದರೆ `ಅಭಿವೃದ್ಧಿ’ ಎಂಬ ಪದವನ್ನು ಅವರು 5000 ಬಾರಿ ಉಚ್ಚರಿಸಿದರು. ಜಾತ್ಯಾತೀತ ಪಕ್ಷಗಳು ಮಾತ್ರ ಮೋದಿ ದ್ವೇಷ, ಮುಸ್ಲಿಂ ತುಷ್ಟೀಕರಣ ಇತ್ಯಾದಿ ಅದೇ ಸವಕಲು ತಂತ್ರಗಳನ್ನೇ ಬಳಸಿದ್ದವು. ಇದರಿಂದ ರೋಸಿ ಹೋದ ಹಿಂದುಗಳೆಲ್ಲಾ ತಮ್ಮ ಜಾತಿ, ಮತ, ವರ್ಗ, ಪಂಗಡ ಇತ್ಯಾದಿಗಳನ್ನು ಮರೆತು ಒಟ್ಟಾಗಿ ನರೇಂದ್ರ ಮೋದಿಯವರಿಗೆ ಮತ ಚಲಾಯಿಸಿದರು. ಇದುವರೆಗೂ ಬಿಜೆಪಿಗೆ ಮತ ನೀಡುತ್ತಿದ್ದವರೆಂದರೆ ಮೇಲ್ಜಾತಿಯವರು, ಮಧ್ಯಮ ವರ್ಗದ ಹಿಂದುಗಳು ಹಾಗೂ ನಗರದಲ್ಲಿರುವ ವಿದ್ಯಾವಂತ ಹಿಂದುಗಳು. ಆದರೆ ಈ ಬಾರಿ ಕೆಳ ವರ್ಗದವರು, ಗ್ರಾಮೀಣ ಪ್ರದೇಶದ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಒಲವು ತೋರಿಸಿರುವುದು ಸ್ಪಷ್ಟ. ಉ.ಪ್ರ.ದಲ್ಲಿ ಶಿಯಾಗಳು ಸೇರಿದಂತೆ ಕೆಲವು ಮುಸ್ಲಿಮರು ಕೂಡ ಬಿಜೆಪಿಗೆ ಮತ ಹಾಕಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ದೇಶದ ಉಳಿದ ಭಾಗದಲ್ಲೂ ಇದೇ ಪರಿಸ್ಥಿತಿಯ ಪುನರಾವರ್ತನೆಯಾಗಿದೆ. ಬಿಜೆಪಿ ಉ.ಪ್ರ.ದ ಹೊರಗೆ ಇತರ ರಾಜ್ಯಗಳಲ್ಲಿ ಅಷ್ಟಾಗಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಬಿಜೆಪಿ ಲೋಕಸಭೆಯ ಚುನಾವಣಾ ಕಣಕ್ಕೆ ಒಟ್ಟು ಇಳಿಸಿದ ಮುಸ್ಲಿಂ ಅಭ್ಯರ್ಥಿಗಳು ಕೇವಲ 5. ಆದರೆ ಅವರೆಲ್ಲರೂ ಸೋತರು. ಬಿಹಾರದ ಬಾಗಲ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ಧ ಬಿಜೆಪಿಯ ಜನಪ್ರಿಯ ಮುಖಂಡ ಶಹನವಾಜ್ ಹುಸೇನ್ ಕೂಡ ಕೇವಲ 9,485 ಮತಗಳ ಅಂತರದಿಂದ ಸೋತರು. ಆದರೆ ರಾಮ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದಿಂದ ಚೌಧರಿ ಮೆಹಬೂಬ್ ಆಲಿ ಕೈಸರ್ (ಖಗರಿಯಾ, ಬಿಹಾರ) ಸೇರಿದಂತೆ ಕೆಲವರು ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅತೀ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಪಶ್ಚಿಮ ಬಂಗಾಳದಿಂದ. ಅಲ್ಲಿ ಒಟ್ಟು 8 ಮಂದಿ ಮುಸ್ಲಿಂ ಅಭ್ಯರ್ಥಿಗಳು (ತೃಣಮೂಲ ಕಾಂಗ್ರೆಸ್‌ನಿಂದ 4, ಕಾಂಗ್ರೆಸ್ ಮತ್ತು ಸಿಪಿಎಂನಿಂದ ತಲಾ 2) ಆಯ್ಕೆಯಾಗಿದ್ದಾರೆ. ಬಿಹಾರದಿಂದ ಆಯ್ಕೆಯಾಗಿರುವುದು ನಾಲ್ವರು ಮುಸ್ಲಿಂ ಅಭ್ಯರ್ಥಿಗಳು (ಕಾಂಗ್ರೆಸ್, ಎನ್‌ಸಿಪಿ, ಆರ್‌ಜೆಡಿ ಮತ್ತು ಲೋಕಜನಶಕ್ತಿ ಪಕ್ಷಗಳಿಂದ ತಲಾ ಒಬ್ಬರು). ಕೇರಳ ಮತ್ತು ಜಮ್ನು-ಕಾಶ್ಮೀರದಿಂದ ತಲಾ ಮೂವರು ಮುಸ್ಲಿಂ ಎಂಪಿಗಳು ಆಯ್ಕೆಯಾಗಿದ್ದಾರೆ. ಕೇರಳದಿಂದ ಆಯ್ಕೆಯಾದ ಮೂವರಲ್ಲಿ ಇಬ್ಬರು ಮುಸ್ಲಿಂಲೀಗಿಗೆ ಸೇರಿದವರು, ಒಬ್ಬರು ಕಾಂಗ್ರೆಸ್ ಪಕ್ಷ. ಜಮ್ಮು-ಕಾಶ್ಮೀರದಿಂದ ಆಯ್ಕೆಯಾದ ಎಲ್ಲಾ ಮೂವರು ಮುಸ್ಲಿಂ ಎಂಪಿಗಳು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಗೆ ಸೇರಿದವರು. ಅಸ್ಸಾಂನಿಂದ ಆಯ್ಕೆಯಾದ ಇಬ್ಬರು ಮುಸ್ಲಿಂ ಸದಸ್ಯರು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ ಸೇರಿದವರು. ಆಂಧ್ರಪ್ರದೇಶ, ಲPದ್ವೀಪ ಮತ್ತು ತಮಿಳ್ನಾಡು ರಾಜ್ಯಗಳಿಂದ ತಲಾ ಒಬ್ಬರು ಮುಸ್ಲಿಂ ಸದಸ್ಯರು ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಕ್ರಮವಾಗಿ ಆಲ್‌ಇಂಡಿಯಾ ಮಜ್ಲಿಸ್ – ಇ – ಇತ್ತೇಹದುಲ್ ಮುಸ್ಲಿಮೀನ್, ಎನ್‌ಸಿಪಿ ಹಾಗೂ ಎಐಎಡಿಎಂಕೆಗೆ ಸೇರಿದವರು.

ಈ ಎಲ್ಲಾ ವಿವರಗಳನ್ನು ಇಲ್ಲಿ ಏಕೆ ನೀಡಲಾಗುತ್ತಿದೆ ಎಂದರೆ ಬಿಜೆಪಿ ಹೊರತುಪಡಿಸಿದ ಜಾತ್ಯಾತೀತ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಎಷ್ಟು ಮನ್ನಣೆ ಕೊಟ್ಟಿವೆ ಎಂಬುದನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸುವುದಕ್ಕಾಗಿ ಮಾತ್ರ. ಬಿಜೆಪಿಯನ್ನು ಮುಸ್ಲಿಂ ವಿರೋಧಿ ಎಂದು ಸದಾ ಕಾಲ ದೂಷಿಸುವ ಈ ಜಾತ್ಯಾತೀತ ಪಕ್ಷಗಳು, ಹಾಗಿದ್ದರೆ ತಮ್ಮ ಪಕ್ಷಗಳಿಂದ ಏಕೆ ಹೆಚ್ಚು ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ? ಮುಸ್ಲಿಮರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಮುಸ್ಲಿಂ ಬಾಹುಳ್ಯವಿರುವ ಪ್ರತಿಯೊಂದು ಕ್ಷೇತ್ರದಿಂದಲೂ ಮುಸ್ಲಿಂ ಅಭ್ಯರ್ಥಿಯನ್ನೇ ಈ ಪಕ್ಷಗಳು ಕಣಕ್ಕಿಳಿಸಬೇಕಿತ್ತಲ್ಲವೇ? ಮೋದಿ ವಿರುದ್ಧ ದ್ವೇಷದ ಬೀಜಗಳನ್ನು ಬಿತ್ತುವುದು , ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಅನಾಹುತವೇ ಆಗುತ್ತದೆಂದು ಹೆದರಿಸುವುದನ್ನು ಬಿಟ್ಟರೆ ಈ ಪಕ್ಷಗಳು ಮುಸ್ಲಿಮರ ಹಿತರಕ್ಷಣೆಗಾಗಿ ಮಾಡಿದ್ದು ಏನೂ ಇಲ್ಲ.

ಮುಸ್ಲಿಮರ ಬಗೆಗಿನ ನಿಜವಾದ ಕಾಳಜಿ ಈ ಪಕ್ಷಗಳಿಗೆ ಇದೆಯೇ ಎನ್ನುವುದೇ ಈಗ ಪ್ರಶ್ನಾರ್ಹ. ಮುಸ್ಲಿಮರ ಸಂರಕ್ಷಕರು ತಾವು ಎಂದು ಮುಖವಾಡ ತೊಟ್ಟ ಈ ಪಕ್ಷಗಳ ಬಣ್ಣ ಈಗ ಬಯಲಾಗಿದೆ. ಮುಸ್ಲಿಮರು ಯಾವತ್ತಿದ್ದರೂ ತಮ್ಮ ಓಟ್ ಬ್ಯಾಂಕ್‌ಎಂಬ ಲಾಗಾಯ್ತಿನ ಭ್ರಮೆಯ ಪೊರೆಯೂ ಕಳಚಿಹೋಗಿದೆ.

ಕೆಲವು ಮುಸ್ಲಿಂ ಮುಖಂಡರು ಚುನಾವಣೆಗೆ ಮುಂಚೆ ಹಿಂದು ಸಮಾಜದ ವಿರುದ್ಧ ಏನೆಲ್ಲಾ ದ್ವೇಷದ ಹೇಳಿಕೆಗಳನ್ನು ನೀಡಿದ್ದರು ಎಂಬುದು ಈಗ ಅವರಿಗೆ ಮರೆತು ಹೋಗಿರಬಹುದು. ಆದರೆ ಹಿಂದು ಸಮಾಜ ಮಾತ್ರ ಅದನ್ನು ಮರೆತಿಲ್ಲ. `15 ನಿಮಿಷ ಭಾರತದ ಪೊಲೀಸರು ಮತ್ತು ಸೈನಿಕರಿಗೆ ಸುಮ್ಮನಿರುವಂತೆ ಸೂಚನೆ ನೀಡಿ, ಭಾರತದಲ್ಲಿರುವ ಹಿಂದುಗಳನ್ನು ಕೊಚ್ಚಿ ಹಾಕುತ್ತೇವೆ’ ಎಂದು ಮಜ್ಲಿಸ್ ನಾಯಕ ಓವೈಸಿ ಫೂತ್ಕರಿಸಿದ್ದರು. ಯುಪಿಎ ಸರಕಾರ ಮುಸಲ್ಮಾನರ ಓಟ್ ಬ್ಯಾಂಕ್ ಕಣ್ಮುಂದಿಟ್ಟುಕೊಂಡೇ ಸಾಚಾರ್ ಸಮಿತಿ ನೇಮಿಸಿ, ಅದರ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸಿತ್ತು. ಭಾರತೀಯ ಸೇನೆಯಲ್ಲಿ ಮುಸಲ್ಮಾನರು ಎಷ್ಟಿದ್ದಾರೆ ಎನ್ನುವುದನ್ನು ಗಣತಿ ಮಾಡಬೇಕು ಎಂದು ಕಾಂಗ್ರೆಸ್‌ನ ಪ್ರಮುಖ ಮುಖಂಡರು ಆಗ್ರಹಿಸಿದ್ದರು. ಚುನಾವಣೆಯಲ್ಲಿ ಗೆದ್ದರೆ ಮುಸಲ್ಮಾನರಿಗೂ ಮೀಸಲಾತಿ ನೀಡಲಾಗುತ್ತದೆ ಎಂದು ಇದೇ ಕಾಂಗ್ರೆಸ್ ನಾಯಕರು ಪೊಳ್ಳು ಭರವಸೆ ನೀಡಿದ್ದರು.

ಆದರೆ ಮುಸ್ಲಿಮರನ್ನು ಓಲೈಸುವ ಈ ಯಾವ ತಂತ್ರಗಳೂ ಫಲ ನೀಡಲಿಲ್ಲ. ಇಂತಹ ತಂತ್ರಗಳಿಗೆ ಈ ಬಾರಿ ಮುಸ್ಲಿಮರು ಮರುಳಾಗಲೇ ಇಲ್ಲ. ಭಾರತದಲ್ಲಿ ಮುಸ್ಲಿಮರಿಗೆ ಬೇಕಿರುವುದು ಕೈಗೊಂದು ಉದ್ಯೋಗ ಜೊತೆಗೆ ನೆಮ್ಮದಿಯ ಬದುಕು. ಅವರಿಗೆ ಉಳಿದ ರಾಜಕೀಯ ಕಟ್ಟಿಕೊಂಡು ಆಗಬೇಕಾದುದು ಏನೂ ಇಲ್ಲ. ಗುಜರಾತ್‌ನಲ್ಲಿ ಬಿಜೆಪಿ 26 ಕ್ಕೆ 26 ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿದ್ದು ಅಲ್ಲಿನ ಬಹುತೇಕ ಮುಸ್ಲಿಮರು ಬಿಜೆಪಿಗೆ ಓಟು ಮಾಡಿದ್ದರಿಂದಲೇ. ಅವರೆಲ್ಲಾ ಅಲ್ಲಿ ಮೋದಿ ಆಡಳಿತದಿಂದ ಸಂತುಷ್ಟರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗ ಮುಸ್ಲಿಂ ಸಮುದಾಯ ಯಾರನ್ನು ತಮ್ಮ ಹಿತರಕ್ಷಕರೆಂದು ಸ್ಪಷ್ಟವಾಗಿ ಗುರುತಿಸಬೇಕಾದ ಅಗತ್ಯವಿದೆ. ಅದೇ ರೀತಿ ತುಷ್ಟೀಕರಣ ರಾಜಕೀಯ ಇನ್ನು ಮುಂದೆ ಫಲ ಕೊಡುವುದಿಲ್ಲ ಎಂಬ ಸತ್ಯವನ್ನೂ ಜಾತ್ಯಾತೀತ ಪಕ್ಷಗಳು ಅರಿಯಬೇಕಾದ ಸಂದೇಶ ಈ ವಿದ್ಯಮಾನಗಳಿಂದ ರವಾನೆಯಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top