
ಕುದುರೆಮುಖ ರಕ್ಷಿತಾರಣ್ಯದ ತಪ್ಪಲಿನಲ್ಲಿರುವ ಊರು ಮಾಳ, ಕಾರ್ಕಳದಿಂದ ಸುಮಾರು 7-8 ಕಿಲೋಮೀಟರ್ ಗಳಷ್ಟು ದೂರದಲ್ಲಿದೆ . ಕಾರ್ಕಳದಿಂದ ಮಾಳದ ಕಡೆಗೆ ಸಾಗುವ ಮಾರ್ಗಮಧ್ಯದಲ್ಲಿ ಮಲ್ಲಾರ್ ಎಂಬ ಹಳ್ಳಿಯಲ್ಲಿದೆ ಜೋಯಿಸರಗುಂಡಿ ಜಲಪಾತ. ಮಲ್ಲಾರದಿಂದ ವಾಹನದಲ್ಲಿ ಹೋಗುವವರು ಮಲ್ಲಾರ್ ಪರಶುರಾಮ ದೇವಸ್ಥಾನದ ವರೆಗೆ ಸಾಗಬೇಕು. ಅಲ್ಲಿ ಜೋಯಿಸರ ತೋಟದಲ್ಲಿ 1ಕಿಲೋಮೀಟರ್ ಸಾಗಿ ಕಾಡನ್ನು ಪ್ರವೇಶಿಸುವಾಗ ಜೋಯಿಸರಗುಂಡಿ ಜಲಪಾತ ಕಣ್ಣಿಗೆ ಬೀಳುತ್ತದೆ. ಈ ಜಲಪಾತ ಊರಿನ ಹೊರಗಿನವರಿಗೆ ಅಪರಿಚಿತವಾದುದರಿಂದ , ದಾರಿ ಅಸ್ಪಷ್ಟವಾಗಿದೆ. ಸುತ್ತಲಿನ ವಾತಾವರಣವೂ ಶುಚಿಯಾಗಿದೆ. ಜಲಪಾತವನ್ನು ದಾಟಿ ಮುಂದೆ ಹೋದರೆ ಕುದುರೆಮುಖ ರಕ್ಷಿತಾರಣ್ಯವನ್ನು ಪ್ರವೇಶಿಸಬಹುದು.
ಜಲಪಾತದ ಬಗ್ಗೆ ಹೇಳುವುದಾದರೆ ಸೃಷ್ಟಿಯ ಪರಮಾದ್ಭುತವೇ ಸರಿ. ತುಂಬಾ ಉದ್ದನೆ ಇರುವ ಜಲಪಾತದ ಪೂರ್ಣನೋಟವನ್ನು ನೋಡಲು ಸಾಧ್ಯವಿಲ್ಲ. ಮೇಲಿನಿಂದ ಬರುವ ನೀರು . ಐದಾರು ಕಡೆ ಬಂಡೆಗಳಿಂದ ರಭಸವಿಲ್ಲದೆ ಧುಮುಕುತ್ತದೆ . ಪ್ರವಾಸಿಗನಿಗೆ ಇದು ಐದಾರು ಜಲಪಾತಗಳ ಗುಚ್ಚದಂತೆ ಕಾಣಿಸುತ್ತದೆ. ನೀರು ಹರಿಯುವ ಜಾಗ ಬಂಡೆಗಳಿಂದ ಆವೃತವಾಗಿದ್ದು ,ಬಂಡೆಗಳು ಪಾಚಿ ಹಿಡಿದು ಸ್ವಲ್ಪ ಜಾರುತ್ತದೆ ಬಿಟ್ಟರೆ ಬೇರೆ ಯಾವುದೇ ಅಪಾಯವಿಲ್ಲ.
ಜಲಪಾತದ ಪಾತ್ರವೂ ಹೆಚ್ಚಿನ ಆಳವಿಲ್ಲದ ಕಾರಣ ಮಕ್ಕಳೂ ಆರಾಮವಾಗಿ ನೀರಲ್ಲಿ ಆಟವಾಡಬಹುದು . ಒಟ್ಟಾರೆ ದಿನನಿತ್ಯದ ಜಂಜಾಟಗಳಿಂದ ಹೊರಬಂದು ಫ್ಯಾಮಿಲಿಯ ಜೊತೆಗೆ ಪಿಕ್ನಿಕ್ ಹೋಗುವುದಕ್ಕೆ ಹೇಳಿಮಾಡಿಸಿದಂತಿದೆ. ಪ್ರಕೃತಿ ಸೌಂದರ್ಯವನ್ನು ಸವಿಯಲು ಆಸಕ್ತಿ ಇರುವ ಪ್ರಕೃತಿಪ್ರಿಯರೊಮ್ಮೆ ಜೋಯಿಸರಗುಂಡಿಗೆ ಹೋಗಿ ಬನ್ನಿ.
ಹತ್ತಿರ ಯಾವುದೇ ಮನೆ, ಹೋಟೆಲ್ ಇಲ್ಲ ಹಾಗಾಗಿ ಊಟ ತಿಂಡಿ ವ್ಯವಸ್ಥೆ ಮಾಡಿಕೊಂಡೆ ಹೋಗಬೇಕು. ಪಕ್ಕದಲ್ಲಿ ಕುದುರೆಮುಖ ರಕ್ಷಿತಾರಣ್ಯ ಇರುವುದರಿಂದ ರಾತ್ರಿಯವೇಳೆ ಕಾಡುಮೃಗಗಳ ಸಂಚಾರ ಸಾಮಾನ್ಯವಾಗಿದ್ದು , ನೀರಿನ ಬಳಿ ರಾತ್ರಿ ಉಳಿದುಕೊಳ್ಳುವ ಯೋಜನೆ ಬೇಡ.